ಬಂಟ್ವಾಳ: ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಮಾಣಿ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಣಮ್ಯ ಶೆಟ್ಟಿ (613) ಮತ್ತು ಪ್ರತೀಕಾ ಕುಲಾಲ್ (611) ಅವರನ್ನು ಗೌರವಿಸಲಾಯಿತು.
ಪರಿಸರದ 25 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ತೆಂಗಿನಕಾಯಿ ವಿತರಿಸಲಾಯಿತು. ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಣಿ ಯುವಕ ಮಂಡಲದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಜಗದೀಶ್ ಜೈನ್, ಕೋಶಾಧಿಕಾರಿ ನಾಗರಾಜ ಪೂಜಾರಿ, ಕ್ರೀಡಾ ಕಾರ್ಯದರ್ಶಿ ದಯಾನಂದ ಪೂಜಾರಿ, ಯುವಕ ಮಂಡಲದ ಹಿರಿಯ ಸದಸ್ಯರಾದ ಹಮೀದ್ ಪಲ್ಕೆ, ಮೋಹನದಾಸ್ ಸುವರ್ಣ, ಗುರುಪ್ರಸಾದ್ ಬಲ್ಯ, ವಿಕೇಶ್ ಶೆಟ್ಟಿ ಕೊಡಾಜೆ, ಗಿರೀಶ್ ಪೂಜಾರಿ ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು. ಬರಿಮಾರು-ಕಲ್ಲೆಟ್ಟಿ ಕಾನಲ್ತಾಯ-ಮಹಾಕಾಳಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪುರುಷರ ಕಬಡ್ಡಿ, ಮಡಕೆ ಒಡೆಯುವುದು ಮತ್ತು ಅಡಿಕೆ ಮರ ಹತ್ತಿ ಮೊಸರು ತೆಗೆಯುವ ಸ್ಪರ್ಧೆಗಳನ್ನು ಸಾಂಕೇತಿಕವಾಗಿ ನಡೆಸಲಾಯಿತು.