ಏಕರೂಪ ಶಿಕ್ಷಣ ಪದ್ಧತಿಯಿಂದ ಕೌಶಲ್ಯ ಬೆಳಗಲು ಸಾಧ್ಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ, ಗ್ರಾಮ ವಿಕಾಸ ಮಂಗಳೂರು ವಿಭಾಗ , ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಭೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಠಿಣತೆಯನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಇದ್ದೇ ಇದೆ, ನಮ್ಮ ಶಿಕ್ಷಣ ಪದ್ದತಿ ಇನ್ನೂ ಬ್ರಿಟೀಷರು ಹಾಕಿಕೊಟ್ಟಂತೆ ಇದೆ, ನೈಪುಣ್ಯತೆಯನ್ನು ಕಲಿಸುವಲ್ಲಿ ನಮ್ಮ ಶಿಕ್ಷಣ ತುಂಬಾ ಹಿಂದಿದೆ. ಇಂದು ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೆ ಬರಲಿದೆ, ಇದರಲ್ಲಿ ಕೌಶಲ್ಯವನ್ನು ಬೆಳಗುವ ಪ್ರಯತ್ನ ನಡೆಯುತ್ತದೆ. ಜಗತ್ತಿಗೆ ಬೇಕಾದುದೆಲ್ಲವನ್ನೂ ಪೂರೈಸುವ ಶಕ್ತಿ ಭಾರತಕ್ಕಿದೆ. ಅದನ್ನು ನಾವು ಸಾಕಾರಗೊಳಿಸಬೇಕಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹರಾದ ನ. ಸೀತಾರಾಮ ಮಾತನಾಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮೂರೂ ಕಡೆ ಏಕ ಕಾಲದಲ್ಲಿ 700ಕ್ಕಿಂತ ಹೆಚ್ಚು ಜನ ವಿವಿಧ ವಿಷಯಗಳಲ್ಲಿ ನೈಪುಣ್ಯತೆಯನ್ನು ಪಡೆಯುತ್ತಿದ್ದಾರೆ. ನಾವು ಇಲ್ಲಿ ಕಲಿತು ಕೇವಲ ಸ್ವಾರ್ಥಿಗಳಾಗದೇ ಸಮಾಜಕ್ಕಾಗಿ ನೀಡುವ ಮನೋಭಾವ ಬೆಳೆಸಿಕೋಳ್ಳಬೇಕು ಎಂದು ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿ ರವೀಂದ್ರ, ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಕೊಂಪದವು ಶುಭ ಹಾರೈಸಿದರು. ಗಣೇಶ.ಪಿ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ಅಡ್ಕಸ್ಥಳ ಸ್ವಾಗತಿಸಿ ಶಿವಕುಮಾರ ವಂದಿಸಿದರು. ವಿದ್ಯಾ ಆಶಯ ಗೀತೆ ಹಾಡಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸೋಮವಾರ ತರಬೇತಿ ಆರಂಭಗೊಂಡಿದ್ದು, ಒಂದು ವಾರ ನಡೆಯಲಿದೆ. ವಿದ್ಯುತ್ ಉಪಕರಣ ದುರಸ್ತಿ, ಪ್ಲಂಬಿಂಗ್ ಮತ್ತು ಇಲೆಕ್ಟ್ರಿಶಿಯನ್, ಗ್ರಾಹಕ ಸೇವಾ ಮಾಹಿತಿ ಹಾಗೂ ಫ್ಯಾಶ ನ್ ಡಿಸೈನಿಂಗ್ ವಿಷಯಗಳಲ್ಲಿ ಒಟ್ಟು 117 ಮಂದಿ ಶಿಕ್ಷಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.