ಶನಿವಾರ 9.3ರ ಮಟ್ಟದಲ್ಲಿ (ಅಪಾಯದ ಮಟ್ಟ 8.5) ಅಪಾಯದ ಮಟ್ಟ ಮೀರಿ ಹರಿದು ಆತಂಕ ಮೂಡಿಸಿದ್ದ ನೇತ್ರಾವತಿ ನದಿಯ ಹರಿವು ಇಂದು ಇಳಿಮುಖವಾಗಿದೆ. ಭಾನುವಾರ ಬೆಳಗ್ಗೆ ನಿಧಾನವಾಗಿ ತಗ್ಗುತ್ತಾ ಬಂದು 6.4ಕ್ಕೆ ಇಳಿದಿತ್ತು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.. ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ. ಆದರೆ ಈಗಾಗಲೇ ನೀಡಿರುವ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಭಾನುವಾರ ಬೆಳಗ್ಗಿನಿಂದಲೇ ಗುಡುಗು ಮಿಂಚಿನ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದೆ. ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳ, ಕೆರೆ, ನೀರು ನಿಂತಿರುವ ಪ್ರದೇಶಗಳಿಗೆ ಸಾರ್ವಜನಿಕರು, ಮಕ್ಕಳು, ವೃದ್ಧರು ತೆರಳಬಾರದಾಗಿ ಆಡಳಿತ ವಿನಂತಿಸಿದೆ.