ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲದ ಕಿಂಡಿ ಅಣೆಕಟ್ಟೆಯಲ್ಲಿ ಕಸಕಡ್ಡಿಗಳು ತುಂಬಿದ ಪರಿಣಾಮ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದಿದೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಗ್ರಾಮ ಪಂಚಾಯಿತಿ ಬಳಿಯಿರುವ ಹೊಳೆಗೆ ಸ್ಥಳೀಯರು ಬೇಸಿಗೆ ಕಾಲದಲ್ಲಿ ಕಿಂಡಿಕಟ್ಟೆ ನಿರ್ಮಾಣ ಮಾಡಿದ್ದರು. ಇದೀಗ ಮಳೆಗಾಲದಲ್ಲಿ ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಬರುತ್ತಿರುವ ಕಸ,ಕಡ್ಡಿ, ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದ ನೀರು ಹರಿಯಲು ಜಾಗವಿಲ್ಲದೇ ಸುತ್ತಲಿನ ಕೊಡಂಗಾಯಿ ಹಮೀದ್ ಮತ್ತು ಕಾದರ್ ಅವರ ತೋಟಗಳಿಗೆ ನೀರು ನುಗ್ಗಿದೆ ಇದರಿಂದ ಕೃಷಿ ತೋಟಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.