ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎನಿಸಿದ ನೇತ್ರಾವತಿ ಸಹಿತ ಕುಮಾರಧಾರಾ, ಗುಂಡ್ಯ ಹೊಳೆಗಳಲ್ಲಿ ನೀರು ಹೆಚ್ಚಾಗಿದ್ದು, ಅಣೆಕಟ್ಟುಗಳಲ್ಲಿ ಸಮೃದ್ಧ ನೀರ ಹರಿವು ಕಾಣಿಸುತ್ತಿದೆ. ಗುರುವಾರ ಬೆಳಗ್ಗಿನ ವರದಿಯಂತೆ ಬಂಟ್ವಾಳದಲ್ಲಿ ನೇತ್ರಾವತಿ 7.6 ಮೀಟರ್ (ಅಪಾಯದ ಮಟ್ಟ 8.5 ಮೀ.), ಉಪ್ಪಿನಂಗಡಿಯಲ್ಲಿ ನೇತ್ರಾವತಿ 29 ಮೀಟರ್ (ಅಪಾಯದ ಮಟ್ಟ 31.5 ಮೀಟರ್), ಉಪ್ಪಿನಂಗಡಿಯಲ್ಲಿ ಕುಮಾರಧಾರಾ 24 ಮೀಟರ್ (ಅಪಾಯದ ಮಟ್ಟ 26.5 ಮೀ.) ಎತ್ತರದಲ್ಲಿ ಹರಿಯುತ್ತಿದ್ದರೆ, ಗುಂಡ್ಯ ಹೊಳೆ 4.7 ಮೀಟರ್ (ಅಪಾಯದ ಮಟ್ಟ 5 ಮೀಟರ್) ಎತ್ತರದಲ್ಲಿ ಹರಿಯುತ್ತಿದೆ. ಇನ್ನು ನೀರಕಟ್ಟೆಯ ಸಾಗರ್ ಡ್ಯಾಂನಲ್ಲಿ 34 ಮೀಟರ್ ನಷ್ಟು ನೀರು ಸಂಗ್ರಹವಿದ್ದು (ಗರಿಷ್ಠ 38 ಮೀಟರ್), ಕಡಬದ ದಿಶಾ ಡ್ಯಾಂನಲ್ಲಿ 4.7 ಮೀಟರ್ (ಗರಿಷ್ಠ 5 ಮೀಟರ್) ಇದ್ದರೆ, ಶಂಭೂರಿನ ಎಎಂಆರ್ ಡ್ಯಾಂನಲ್ಲಿ 18.9 ಮೀಟರ್ (ಗರಿಷ್ಠ 18.9 ಮೀ.) ನೀರು ಸಂಗ್ರಹವಿದೆ. ಶಂಭೂರು ಡ್ಯಾಂನ 8 ಗೇಟ್ ಗಳನ್ನು ಶೇ.50ರಷಟು ಹಾಗೂ 1 ಗೇಟ್ ಅನ್ನು ಶೇ 40ರಷ್ಟು ತೆರೆಯಲಾಗಿದೆ. ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನಲ್ಲಿ 6.4 ಮೀಟರ್ (ಗರಿಷ್ಠ 7 ಮೀ) ನೀರು ಸಂಗ್ರಹವಿದ್ದು, ಇಲ್ಲಿರುವ ಎಲ್ಲ ಗೇಟ್ ಗಳನ್ನು ತೆರೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಳೆ ಕಡಿಮೆ ಹಾಗೂ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಸಂಗ್ರಹವಾಗಿದೆ. ಕಳೆದ ವರ್ಷ ತುಂಬೆ ಡ್ಯಾಂನಲ್ಲಿ 10 ಮೀಟರ್ ನೀರು ಹರಿದಿದ್ದರೆ, ಈ ವರ್ಷ 6.5 ಮೀಟರ್ ನೀರು ಸಂಗ್ರಹವಿದೆ. ಆದರೆ ಘಟ್ಟ ಪ್ರದೇಶದಲ್ಲಿ ಮಳೆ ಬಂದರೆ ಇದು ಹೆಚ್ಚಾಗುವ ಸಂಭವವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.