ಬಂಟ್ವಾಳದಲ್ಲಿ ಇಡೀ ದಿನ ಧಾರಾಕಾರ ಗಾಳಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಹಾನಿಗಳು ಸಂಭವಿಸಿವೆ. ಮಂಗಳವಾರ ಬೆಳಗ್ಗೆ ನೇತ್ರಾವತಿ ನದಿ 5.9 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದರೆ, ಸಂಜೆ ವೇಳೆ 6 ಮೀಟರ್ ಎತ್ತರಕ್ಕೆ ತಲುಪಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿದೆ. ಕೆಲವೆಡೆ ಅಪಘಾತಗಳಿಂದ ರಸ್ತೆ ಬ್ಲಾಕ್ ಆಗಿದ್ದರೆ, ಇನ್ನು ಕೆಲವೆಡೆ ಮಣ್ಣು ಕುಸಿದ ಘಟನೆಗಳೂ ಸಂಭವಿಸಿವೆ.
ಮೇಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ಸಂಜೆ ವೇಳೆ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದುಸಂಚಾರಕ್ಕೆ ಅಡಚಣೆ ಉಂಟಾಯಿತು. ಬಿ.ಸಿ.ರೋಡ್ ಕಡೆಯಿಂದ ಮಾಣಿ ಕಡೆಗೆ ಮರದ ತುಂಡುಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಮೇಲ್ಕಾರ್ ಸಮೀಪ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿಬಿದ್ದಿದೆ. ಬಳಿಕ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲಾಯಿತು. ಸೂರಿಕುಮೇರು ಎಂಬಲ್ಲಿ ಹಳೆಯದಾದ ಆಲದ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಯಿತು. ನಿರಂತರವಾಗಿ ಸುರಿಯುವ ಮಳೆಗೆ ಗುಡ್ಡ ಜರಿದು ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್ ಕಾಮಗಾರಿ ಪಿಲ್ಲರ್ ಗಳು ಮಣ್ಣಿನೊಳಗೆ ಸಿಲುಕಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಸಿದ್ಧಕಟ್ಟೆಯಲ್ಲಿ ಕಂಬಗಳು ಉರುಳಿದರೆ, ಸಾಲೆತ್ತೂರು ಸಮೀಪ ಕರೈ ಎಂಬಲ್ಲಿ ಮರವೊಂದು ಉರುಳಿ ಸ್ಥಳೀಯರು ಸುಗಮ ಸಂಚಾರಕ್ಕೆ ಸಹಕರಿಸಿದರು. ತಾಲೂಕಿನ ಹಲವೆಡೆ ಅಲ್ಲಲ್ಲಿ ಸಣ್ಣಪುಟ್ಟ ರಸ್ತೆ ಅಪಘಾತಗಳು ಸಂಭವಿಸಿವೆ. ಬೋಳಂಗಡಿಯಲ್ಲಿ ಕ್ರೇನ್ ಮೂಲಕ ಲಾರಿಯನ್ನು ಬದಿಗೆ ಸರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.