ಹಡೀಲು ಬಿದ್ದ ಗದ್ದೆಯೊಂದಕ್ಕೆ ಭಾನುವಾರ ಕಲ್ಲಡ್ಕ ಸಮೀಪ ನೆಟ್ಲದ ಗ್ರಾಮಸ್ಥರು ಉಳುಮೆ ಮಾಡಿ ಮಾದರಿಯಾದರು. ಆರೆಸ್ಸೆಸ್ ಪ್ರಮುಖ, ಕಲ್ಲಡ್ಕ ಡಾ. ಪ್ರಭಾಕರ ಭಟ್ ಸ್ವತಃ ಗದ್ದೆಗಿಳಿದು ನೇಜಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮಸ್ಥರನ್ನು ಹುರಿದುಂಬಿಸಿದರು.
ನಿಟಿಲಾಕ್ಷ ಸದಾಶಿವ ದೇವಸ್ಥಾನದ ಸುಮಾರು 2 ಎಕರೆ ಗದ್ದೆ ಕೆಲ ವರ್ಷಗಳಿಂದ ಹಡೀಲು ಬಿದ್ದಿದ್ದು, ದೇವಸ್ಥಾನಕ್ಕೆ ಆದಾಯ ತರುವ ಹಿನ್ನೆಲೆಯಲ್ಲಿ ಭತ್ತದ ಕೃಷಿ ಮಾಡುವ ಕುರಿತು ಗ್ರಾಮಸ್ಥರು ಹೊರಟಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಉಳುಮೆ ಕಾರ್ಯ ನಡೆಯಿತು. ನಿಟಿಲೇಶ್ವರ ಸನ್ನಿಧಿಯಲ್ಲಿ ಅತನ ಆಶೀರ್ವಾದ ದಿಂದ ನಿಟಿಲೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯ ನಡೆದಿದ್ದು, ಇದರಿಂದ ಕೃಷಿ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ ಎಂದು ಹೇಳಿದ ಡಾ. ಭಟ್, ನಮ್ಮ ದೇಶದ ಮೂಲ ಶಕ್ತಿ ಇರುವುದು ಹಳ್ಳಿಯಲ್ಲಿ, ಹಳ್ಳಿಯ ಮೂಲ ಶಕ್ತಿ ಯಿರುವುದು ಕೃಷಿಯಲ್ಲಿ, ಹಾಗಾಗಿ ಮತ್ತೊಮ್ಮೆ ಕೃಷಿಯಕಡೆಗೆ ಜನ ಹೋಗಬೇಕು, ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲ. ಜೀವನಕ್ಕೆ ಆಹಾರ ಧಾನ್ಯಗಳೇ ಬೇಕು .ಆಹಾರ ಧಾನ್ಯ ಗಳಲ್ಲಿ ಭತ್ತ ಪ್ರಮುಖವಾದದ್ದು, ಅ ಹಿನ್ನೆಲೆಯಲ್ಲಿ ಭತ್ತದ ಕೃಷಿಯನ್ನು ಮಾಡುವ ದೊಡ್ಡ ಪ್ರಯತ್ನವನ್ನು ಭಕ್ತರು ಮಾಡಿದ್ದಾರೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಜೇತ್ ಹೊಳ್ಳ ಪ್ರಾರ್ಥಿಸಿದರು. ಕಿರಣ್ ನೆಟ್ಲ, ಕುಮಾರಸ್ವಾಮಿ, ಮಾಧವ ಭಟ್, ನವೀನ್ ಶೆಟ್ಟಿ ಚನಿಲ, ಅನಿಲ್ ದೇವಾಡಿಗ, ರವಿ ದೇವಾಡಿಗ, ವಿನಯ ಗಟ್ಟಿ, ಪ್ರಸನ್ನ ಕುಮಾರ್, ಐತ್ತಪ್ಪ ನಾಯ್ಕ್, ಜಗನ್ನಾಥ ಕುಲಾಲ, ನಾಗೇಶ ಎನ್, ಮಾದವ ಗಟ್ಟಿ, ಇಂದಿರಾ, ಭಾಗ್ಯ, ಸುಮತಿ , ಪುಷ್ಪ, ರತ್ನಾವತಿ ಮತ್ತು ಊರವರು ಭಾಗವಹಿಸಿದ್ದರು.