ಸಂಪತ್ತು ಎಂದರೆ ಹಣ ಮಾತ್ರವಲ್ಲ. ಇದರಲ್ಲಿ ಅಷ್ಟ ಐಶ್ವರ್ಯಗಳು ಸೇರಿವೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ. ಸಂಪತ್ತನ್ನು ಹೇಗೆ ಬಳಸಬೇಕೆಂಬುದನ್ನು ಅಧ್ಯಾತ್ಮಿಕತೆ ತಿಳಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಜರಗಿದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯ ಸಂದರ್ಭ ಆಶೀರ್ವಚನ ನೀಡಿದರು.
ಧರ್ಮಪ್ರಜ್ಞೆಯ ಸಂಪತ್ತಿನೊಂದಿಗೆ ಜ್ಞಾನವೂ ನಮ್ಮಲ್ಲಿ ಇರಬೇಕು. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾ ಶಕ್ತಿಗಳು ಸೇರಿಕೊಂಡಾಗ ಜೀವನಮೌಲ್ಯ ವೃದ್ಧಿಸುತ್ತದೆ. ಶ್ರಾವಣ ಮಾಸದ ಮೊದಲ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯನ್ನು ಆಚರಿಸುವುದು ವಾಡಿಕೆ. ಇಂತಹ ಆಚರಣೆಗಳು ರಾಷ್ಟ್ರೀಯ ಭಾವನೆಯನ್ನು ಮೂಡಿಸುತ್ತದೆ. ಸಮುದ್ರ ಮಥನದಿಂದ ವಿಷ-ಅಮೃತ ಇತ್ಯಾದಿ ದೊರೆತಂತೆ ಬದುಕಿನ ಮಂಥನದಿಂದ ಸುಖ-ದುಃಖಗಳು ಪ್ರಾಪ್ತವಾಗುತ್ತವೆ. ತಾನೂ ಬದುಕಿ ಇತರರನ್ನು ಬದುಕಬಿಡುವುದೇ ನಿಜಾರ್ಥದ ಜೀವನ. ಜೀವನ ಮೌಲ್ಯವು ಇದರಲ್ಲೇ ಅಡಗಿದೆ. ಇದೊಂದು ಪಾಠವೂ ಹೌದು. ಅರ್ಥಪೂರ್ಣ ಸಂಸ್ಕೃತಿಯೇ ಭಾರತೀಯ ಪರಂಪರೆ. ಸ್ವದೇಶಿ ಉತ್ಪನ್ನಗಳನ್ನು ಬಳಸುವುದರೊಂದಿಗೆ, ಇದೀಗ ಕೃಷಿಯ ಬಗ್ಗೆಯೂ ಮನಮಾಡಿರುವುದು ಆರೋಗ್ಯಕರ ಬೆಳವಣಿಗೆ. ಮಹಿಳೆಯರೂ ಸಹ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದವರು ನುಡಿದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಕಾರ್ಯದರ್ಶಿ ಆಶಾ ಭಾಸ್ಕರ ಶೆಟ್ಟಿ ಹಾಗೂ ಸರಿತಾ ಅಶೋಕ್‌ಕುಮಾರ್ ಹಾಗೂ ಸದಸ್ಯರು ಸಹಕರಿಸಿದ್ದು, ನಿಗದಿತ ಸದಸ್ಯರು, ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸದಸ್ಯರು ಹಾಗೂ ಗುರುಬಂಧುಗಳು ಪಾಲ್ಗೊಂಡಿದ್ದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀವ್ರತಪೂಜೆ ನೆರವೇರಿತು.