ಬಂಟ್ವಾಳ:ಲೊರೆಟ್ಟೋ ಚರ್ಚ್ ಧರ್ಮಗುರುಗಳಾಗಿ ಆಗಮಿಸಿದ ವಂ.ಫ್ರಾನ್ಸಿಸ್ ಕ್ರಾಸ್ತ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯನ್ ಡಿಸೋಜ ಹಾಗೂ ಲೊರೆಟ್ಟೊ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಐಸಾಕ್ ವಾಸ್ ಹೂಗುಚ್ಛ ನೀಡಿ ಸ್ವಾಗತಿಸಿದರು.
ಧರ್ಮಗುರುಗಳ ಸೇವಾ ಸ್ಥಾನದ ಪಾರ್ಥನ ವಿಧಿಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪ್ರತಿನಿಧಿಯಾಗಿ ಬಂಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ಹಾಗೂ ಮೊಡಂಕಾಪು ಚರ್ಚಿನ ಧರ್ಮಗುರುಗಳಾದ ವಂ. ವಲೇರಿಯನ್ ಡಿಸೋಜ ನೆರವೇರಿಸಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಧರ್ಮಗುರುಗಳು, ತಮ್ಮ ಸೇವಾವಧಿಯಲ್ಲಿ ಚರ್ಚಿನ ಸರ್ವತೋಮುಖ ಅಭಿವೃದ್ಧಿಗೆ ಶುಭ ಹಾರೈಸಿ, ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಪಾಲಡ್ಕ ಚರ್ಚಿಗೆ ವರ್ಗಾವಣೆಗೊಂಡ ವಂದನೀಯ ಎಲ್ಯಾಸ್ ಡಿಸೋಜ ಸೇವೆಯನ್ನು ಸ್ಮರಿಸಿದರು. ನೂತನ ಧರ್ಮಗುರುಗಳಾದ ಸೇವಾ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ವಂ.ಫ್ರಾನ್ಸಿಸ್ ಕ್ರಾಸ್ತಾ, ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ನೀಡಿದ ಬೋಧನೆಗಳ ನೆನಪಿಸಿ, ಅವರ ಆದರ್ಶ, ತ್ಯಾಗಮಯ ಜೀವನವನ್ನು ಸಮುದಾಯ ದಲ್ಲಿ ಅಳವಡಿಸಿ ಒಂದು ಕುಟುಂಬದ ಸದಸ್ಯರಂತೆ ಚರ್ಚ್ ನ ಉತ್ತಮ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ. ಪೀಟರ್ ಗೊನ್ಸಾಲ್ವಿಸ್, ಶಿರ್ತಾಡಿ ಚರ್ಚಿನ ಧರ್ಮಗುರುಗಳಾದ ವಂ. ಹೆರಾಲ್ಡ್ ಮಸ್ಕರೇನಸ್, ನಿರ್ಮಲ ಕಾನ್ವೆಂಟ್ ನ ಸುಪಿರಿಯರ್ ಆಗ್ನೆಸ್ ಅಂದ್ರಾದೆ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಐಸಕ್ ವಾಸ್ ಸ್ವಾಗತಿಸಿದರು. ಕಾರ್ಯದರ್ಶಿ ಆಲ್ವಿನ್ ಪಿಂಟೊ ವಂದಿಸಿದರು. ರೋಶನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.