ಬಂಟ್ವಾಳ

ಏಕರೂಪದ ಶಿಕ್ಷಣ ಜಾರಿ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಸ್ವಾಗತ

ಬಂಟ್ವಾಳ: ದೇಶಾದ್ಯಂತ ಏಕರೂಪದ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿರುವುದನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಸ್ವಾಗತಿಸಿದೆ.

ದೇಶಾದ್ಯಂತ ಸಮಾನ ಶಿಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ  ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಳೆದ ವರ್ಷ ಇದೇ ವೇಳೆಗೆ ಭಾರತ ರಥಯಾತ್ರೆ ನಡೆಸಿ ಅ. 1 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವರ ಮೂಲಕ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿತ್ತು. ಉತ್ತಮ ಅಂಶಗಳು ತಮ್ಮ ಮನವಿಯಲ್ಲಿದ್ದು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸುವ ಬಗ್ಗೆ ಆ ಸಂದರ್ಭ ಸಚಿವರು ಭರವಸೆ ನೀಡಿದ್ದರು. ದೆಹಲಿಯಲ್ಲಿ ಧರಣಿ ನಡೆಸಿ ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲೇ ಕೇಂದ್ರ ಸರಕಾರ ಇಂತಹ ಮಹತ್ವದ ತೀರ್ಮಾನ ಪ್ರಕಟಿಸಿದೆ. ಇದು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ಬಡವರಿಗೂ ಶ್ರೀಮಂತರಿಗೂ ಏಕರೂಪದ ಶಿಕ್ಷಣ ಸಿಗಬೇಕು, ಶಿಕ್ಷಣ ವಂಚಿತರಾಗಿರುವ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡಬೇಕು ಎನ್ನುವ ಆಶಯವನ್ನಿಟ್ಟುಕೊಂಡು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಮತ್ತು ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. 2018ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಮಂಗಳೂರಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿತ್ತು. ಆ ಬಳಿಕ ಕಳೆದ ವರ್ಷ ಜುಲೈ ತಿಂಗಳ ಅಂತ್ಯದ ವೇಳೆಗೆ ಭಾರತ ರಥಯಾತ್ರೆ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಾಸ್ಥಾನ್, ಹರಿಯಾಣ, ದೆಹಲಿ ರಾಜ್ಯಗಳನ್ನು ರಥಯಾತ್ರೆಯ ಮೂಲಕ ಸಂಪರ್ಕಿಸಿ ವಿಶೇಷವಾಗಿ ಅಲ್ಲಿನ ಕೊಳೆಗೇರಿ, ಬೀದಿಗಳಲ್ಲಿ ಸಮಾನ ಶಿಕ್ಷಣ ಜಾರಿ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿತ್ತು. ಅ. 1 ರಂದು ದೆಹಲಿಯಲ್ಲಿ ನಡೆದ ಸಮಾರೋಪದಲ್ಲಿ ಕರ್ನಾಟಕದ ಸಂಸದರಾದ ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ,  ಭಗವಾನ್ ಕೂಬಾ ಅವರ ಮೂಲಕ ಕೇಂದ್ರ ಮಾನವ ಖಾತೆ ರಾಜ್ಯ ಸಚಿವ ರಮೇಶ್ ಪೋಕ್ರಿಯಾಲ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಏಕರೂಪ ಶಿಕ್ಷಣ ಜಾರಿಯ ಪೂರಕವಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ರಾಜಾಸ್ಥಾನ ಅಧ್ಯಯನ ಪ್ರವಾಸ, ಕರ್ನಾಟಕದಲ್ಲಿ ರಥಯಾತ್ರೆ, ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲಾ ಒಟ್ಟು ಹೋರಾಟದ ಬಹುತೇಕ ಆಶಯಗಳು ಹೊಸ ಶಿಕ್ಷಣ ನೀತಿಯಲ್ಲಿರುವುದು ಖುಷಿ ಕೊಟ್ಟಿದೆ ಎಂದು ಪ್ರಕಾಶ್ ಅಂಚನ್ ತಿಳಿಸಿದ್ದಾರೆ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ