ಆತ್ಮನಿರ್ಭರ ಭಾರತ ಯೋಜನೆ ಸಾಕಾರಗೊಳಿಸಲು ಗ್ರಾಮ ವಿಕಾಸ ಸಮಿತಿಯ ಮಂಗಳೂರು ವಿಭಾಗ, ದ.ಕ.ಜಿಲ್ಲಾ ಸಹಕಾರ ಭಾರತಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಮೊದಲ ಹಂತದ ಕಾರ್ಯಕ್ರಮ ಸುಳ್ಯದ ಎಪಿಎಂಸಿ ಹಾಲ್, ಕಲ್ಲಡ್ಕ ಶ್ರೀರಾಮ ಮಂದಿರ ಹಾಲ್ ಮತ್ತು ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಇಂದು ಆರಂಭಗೊಂಡಿತು.
ಮೂರು ವಾರಗಳ ಕಾಲ ಈ ತರಬೇತಿ ನಡೆಯುತ್ತಿದೆ. ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ 5 ವಿಷಯಗಳ ತರಬೇತಿ, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ 4 ವಿಷಯಗಳ ತರಬೇತಿ ಮತ್ತು ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ 3 ವಿಷಯಗಳ ತರಬೇತಿ ನಡೆಯುತ್ತಿದೆ. ಎಲ್ಲ ಕೇಂದ್ರಗಳಲ್ಲೂ ಪ್ರತ್ಯೇಕ ವಿಷಯಗಳಲ್ಲಿ ತರಬೇತಿ ನಡೆಯುತ್ತಿದ್ದು, ಈ ವಾರ ಮೂರು ಕೇಂದ್ರಗಳಲ್ಲಿ ಒಟ್ಟು 185 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿದಿನ 5 ಗಂಟೆ ಕಾಲ ಒಟ್ಟು 6 ದಿನ ತರಬೇತಿ ನಡೆಯಲಿದೆ. ಒಟ್ಟು 60 ಮಂದಿ ಸಂಪನ್ಮೂಲ ವ್ಯಕ್ತಿಗಳು ಇಲ್ಲಿದ್ದಾರೆ ಎಂದು ಹೇಳಿದರು ಆರೆಸ್ಸೆಸ್ ಮಂಗಳೂರು ವಿಭಾಗದ ಗ್ರಾಮವಿಕಾಸ ಸಂಯೋಜಕ್ ಪ್ರವೀಣ ಸರಳಾಯ. ಹೈನುಗಾರಿಕೆ, ಕೃಷಿಯಂತ್ರೋಪಕರಣ ಬಳಕೆ ಮತ್ತು ದುರಸ್ತಿ ಹಾಗೂ ಪ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಬಗ್ಗೆ ಕಲ್ಲಡ್ಕದಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಂಯೋಜಕ ವಜ್ರನಾಥ ಕಲ್ಲಡ್ಕ.
ಕಲ್ಲಡ್ಕದಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್. ಆಶಯ ಮಾತುಗಳನ್ನಾಡಿದರು, ಮುಖ್ಯ ಅತಿಥಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಮುರಳೀಧರ ಉಪಸ್ಥಿತರಿದ್ದರು. ಶ್ರೀರಾಮ ಮಂದಿರದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾ ಆಶಯಗೀತೆ ಹಾಡಿದರು.ಶ್ರೀರಾಮ ಸೊಸೈಟಿಯ ಉಪಾಧ್ಯಕ್ಷ ಸುಜಿತ್ ಕೊಟ್ಟಾರಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.