ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವದೊಂದಿಗೆ ಶ್ರೀ ನಾರಾಯಣಗುರುಗಳ ಕೇರಳದ ಶಿವಗಿರಿಯಲ್ಲಿ ಸ್ಥಾಪನೆ ಮಾಡಿದ ದೇವಸ್ಥಾನ ಮಾದರಿಯಲ್ಲಿ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ನಾರಾಯಣಗುರು ಮಂದಿರ ತಲೆಯೆತ್ತಲಿದೆ. ಸುಮಾರು 2 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನೂತನ ಗುರುಮಂದಿರ, ಸಮುದಾಯ ಭವನ ನಿರ್ಮಾಣವಾಗಲಿದ್ದು, ಈಗಾಗಲೇ ಶಿಲಾನ್ಯಾಸ ನೆರವೇರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ದಿನಂಪ್ರತಿ ಕರಸೇವಕರು ನಿರಂತರ ಸೇವೆಯಲ್ಲಿ ತೊಡಿಸಿಕೊಂಡಿದ್ದಾರೆ. ಗುರುಮಂದಿರ ನಿರ್ಮಾಣದ ಮುಂದಿನ ಕಾರ್ಯ ಯೋಜನೆ, ಗ್ರಾಮದ ಸದಸ್ಯರ ಕರಸೇವೆ ಕುರಿತು ರಾಯಿ, ಕೊಲ, ಅರಳ ಗ್ರಾಮದ ಗ್ರಾಮಸ್ಥರ ಸರಣಿ ಸಭೆ ಜುಲೈ 26ರಂದು ಅಂಚನ್ ಗಾರ್ಮೆಂಟ್ ಮಾಲೀಕ ಪ್ರಕಾಶ್ ಅಂಚನ್ ಗೌರವ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಅಧ್ಯಕ್ಷತೆಯಲ್ಲಿ ನಡೆಯಿತು. ಗುರುಮಂದಿರ, ಸಭಾಂಗಣ ನಿರ್ಮಾಣದ ಮುಂದಿನ ಕಾರ್ಯ ಯೋಜನೆಗಳೇನು ಎಂಬುದರ ಬಗ್ಗೆ ಸಮಾಲೋಚನೆ ನಡೆಯಿತು.
ಎಲ್ಲಾ ಸಮಾಜದವರ ಸಹಕಾರದ ಜೊತೆಜೊತೆಗೆ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಯಿತು. ಈಗಾಗಲೇ ಅನೇಕ ಮಂದಿ ಕರಸೇವಕರು ದಿನಂಪ್ರತಿ ಕರಸೇವೆಯಲ್ಲಿ ತೊಡಗಿಕೊಂಡಿದ್ದು, ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳಿಗೆ ಜಾತಿ ಮತ ಭೇದವಿಲ್ಲದೆ ಕರೆಸೇವೆಗೆ ಅವಕಾಶ ಕಲ್ಪಿಸುವ ಬಗ್ಗೆ ಸಮಾಲೋಚನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪ್ರತಿಯೊಬ್ಬ ಮನದಿಚ್ಛೆಯಂತೆ ಮಂದಿರದಲ್ಲಿ ತಮ್ಮ ಪಾಲು ಇರಲಿ ಎನ್ನುವ ಸಂಕಲ್ಪದೊಂದಿಗೆ ಒಂದು ಕಲ್ಲಿನ ಬಾಬ್ತು 50 ರೂಪಾಯಿಯ ರಶೀದಿ ಪಡೆದು ಗುರುಗಳ ಸೇವೆಯಲ್ಲಿ ತೊಡಗಲು ಅವಕಾಶ ಕಲ್ಪಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.