ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ವರೆಗೆ ಇರುವ ಚತುಷ್ಪಥ ರಸ್ತೆ ಹೆಸರಿಗಷ್ಟೇ. ಇಲ್ಲಿರುವ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಪಕ್ಕ ಕಳೆದ ವರ್ಷ ನಡೆದ ಅಪಘಾತದಲ್ಲಿ ನಾಲ್ವರು ಅಸು ನೀಗಿದ್ದರು. ಈಗ ವಾಹನದಟ್ಟಣೆ ಅಷ್ಟಾಗಿರದ ಕಾರಣ ಅಪಘಾತ ಕಡಿಮೆಯಾದರೂ ಅಪಾಯವಂತೂ ನಿಶ್ಚಿತ.
ಬಿ.ಸಿ.ರೋಡ್ ಸುರತ್ಕಲ್ ನ ಚತುಷ್ಪಥ ರಸ್ತೆಯಲ್ಲಿ ಕಾಣಿಸುವ ಅತ್ಯಂತ ಅಪಾಯಕಾರಿ ಜಾಗ ಎಂದೇ ಹೇಳಲಾಗುವ ಬ್ರಹ್ಮರಕೂಟ್ಲು ಟೋಲ್ ಪ್ರಾಜಾ ಸುತ್ತಮುತ್ತಲಿನ ಜಾಗದಲ್ಲಿ ಕಳೆದ ವರ್ಷ ಟವೇರಾ ಕಾರು ಮತ್ತು ಬುಲೆಟ್ ಟ್ಯಾಂಕರ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಅಸು ನೀಗಿದ್ದರು. ಬಿ.ಸಿ.ರೋಡಿನ ತಲಪಾಡಿಯಿಂದ ಟೋಲ್ ಪ್ಲಾಜಾ ಕ್ಕಿಂತ ಸುಮಾರು ಅರ್ಧ ಕಿ.ಮೀ. ಆಸುಪಾಸಿನ ರಸ್ತೆ ವಾಹನ ಚಾಲಕರನ್ನು ದಂಗುಬಡಿಸುವಂತೆ ರಚನೆಯಾಗಿದೆ. ಇಕ್ಕಟ್ಟಿನ ರಸ್ತೆ ಪಕ್ಕದಲ್ಲೇ ಟೋಲ್ ಪ್ಲಾಝಾ ನಿರ್ಮಾಣವಾಗಿರುವುದು ಹಾಗೂ ಚತುಷ್ಪಥ ರಸ್ತೆಯನ್ನು ಸಂಪೂರ್ಣಗೊಳಿಸದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಬಿ.ಸಿ.ರೋಡ್ ತಲಪಾಡಿಯಿಂದ ತುಂಬೆ ರಾಮಲ್ ಕಟ್ಟೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರೀಕ್ಷಿತ ರೀತಿಯಲ್ಲಿ ನಡೆಯದ ಕಾರಣ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಎಂದು ಈ ರಸ್ತೆ ರಚನೆಯಾಗುವ ಹೊತ್ತಿನಲ್ಲೇ ಸ್ಥಳೀಯರು ಹೇಳುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ರಾಮಲ್ ಕಟ್ಟೆ, ತಲಪಾಡಿ ಮೆಸ್ಕಾಂ ಸ್ಟೇಶನ್ ಎದುರು ಅಪಘಾತಗಳು ಸಂಭವಿಸಿ ಮರಣವೂ ಸಂಭವಿಸಿದ್ದವು. ಮಿನಿಸೇತುವೆಯಲ್ಲಿ ಸಂಚರಿಸುವುದು ಅಪಾಯವನ್ನು ಆಹ್ವಾನಿಸಿದಂತೆ, ಈಗ ಕೊರೊನಾ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಕಡಿಮೆ. ಇಲ್ಲದೇ ಇದ್ದರೆ, ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ವಾಹನಗಳನ್ನು ತಡೆದು ಸುಂಕ ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ವೇಳೆ ವಾಹನಗಳ ಸಾಲು ಬೆಳೆಯಲಾರಂಭಿಸುತ್ತದೆ. ಬಿ.ಸಿ.ರೋಡಿನಿಂದ ಟೋಲ್ ಪ್ರಾಜಾದ ಕಡೆಗೆ ಬರುವ ಸಂದರ್ಭ ವಾಹನಗಳು ನೇರವಾಗಿ ಟೋಲ್ ಕಡೆಗೆ ಬರುತ್ತಾರೆ, ಆದರೆ ಚತುಷ್ಪಥ ರಸ್ತೆ ದಿಢೀರನೆ ಕಡಿತಗೊಂಡು ಎದುರಿನಿಂದ ವಾಹನಗಳು ಬರುವಾಗ ಚಾಲಕ ಗಲಿಬಿಲಿಗೊಳ್ಳುತ್ತಾನೆ. ಅದೇ ರೀತಿ ಮಂಗಳೂರಿನಿಂದ ಬರುವ ವಾಹನಗಳು ಟೋಲ್ ಪಾವತಿಸಿ ಬಿ.ಸಿ.ರೋಡ್ ಕಡೆ ಸಂಚರಿಸುವ ಸಂದರ್ಭ ಬಲಕ್ಕೆ ಚಲಿಸಬೇಕಾಗುತ್ತದೆ. ಆ ಸಂದರ್ಭ ಕೆಲವೊಮ್ಮೆ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ವಾಹನಗಳು ಬರುವುದನ್ನು ಗಮನಿಸುವುದಿಲ್ಲ. ಆಗ ಏನಾಗುತ್ತದೆ? ಅಪಘಾತಗಳು ಸಂಭವಿಸುತ್ತವೆ.