ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೀಗ ಎಸ್.ಒ.ಪಿ. ಮಾದರಿ ಕರ್ತವ್ಯ. ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ. ಠಾಣೆಯಲ್ಲಿ ಐವರು ಸಿಬ್ಬಂದಿಯಷ್ಟೇ ಕರ್ತವ್ಯ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ .ಒ.ಪಿ.) ಜಾರಿಗೆ ಬಂದಿರುವ ಜಿಲ್ಲೆಗಳು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ. ಕೊರೊನಾ ತಡೆ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಠಿಣ ಕ್ರಮದ ಸರ್ಪಗಾವಲು. ಏನಿದು ಎಸ್.ಒ.ಪಿ?
ಪ್ರತಿಯೊಬ್ಬ ಸಿಬ್ಬಂದಿ ಮನೆಯಿಂದ ಹೊರಟ ತಕ್ಷಣ ಮಾಸ್ಕ್ ಹಾಕಬೇಕು, ಸ್ಯಾನಿಟೈಸರ್ ಬಳಸಬೇಕು, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಫೇಸ್ ಕವರ್ ಬಳಸಿ, ಸಾಮಾಜಿಕ ಅಂತರದಲ್ಲಿ ವ್ಯವಹರಿಸಬೇಕು, ಪ್ರತಿ ಪೊಲೀಸ್ ಠಾಣೆಯಲ್ಲಿ ಗ್ಲಾಸ್ ಕ್ಯಾಬಿನ್ ಅಳವಡಿಕೆ ಮಾಡಬೇಕು. ಸ್ಪ್ರೇ ಮಾಡಲು ಹ್ಯಾಂಡ್ ಆಪರೇಟರ್ ಪಂಪ್ ಬಳಸಬೇಕು, ಪೊಲೀಸ್ ಸಿಬ್ಬಂದಿ ಆರೋಪಿಗಳ ಬಂಧನ ಕಾರ್ಯಾಚರಣೆ ವೇಳೇ ತಂಡ ರಚಿಸಿ ಆರೋಪಿಗಳೂ ಪಿಪಿಇ ಕಿಟ್ ಧರಿಸಬೇಕು, ಎನ್ 95 ಮಾಸ್ಕ್ ಧರಿಸಬೇಕು, ಗ್ಲೌಸ್ ಹಾಕಿರಬೇಕು ಎಂದು ಸೂಚಿಸಲಾಗಿದೆ. ನಿಯಮ ಪ್ರಕಾರ ಶೇ.30ರಷ್ಟು ಸಿಬ್ಬಂದಿ (ಸೆಂಟ್ರಿ, ಎಸ್ ಎಚ್ ಒ, ರೈಟರ್, ಕಂಪ್ಯೂಟರ್ ಸಿಬ್ಬಂದಿ, ತನಿಖೆಗೆ ಸಹಾಯಕರೊಬ್ಬರು) ಮಾತ್ರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಔಟ್ ಡೋರ್ ಕರ್ತವ್ಯ ನಿರ್ವಹಿಸುವವರು ಠಾಣೆಗೆ ಬರುವಂತಿಲ್ಲ ಎಂಬಿತ್ಯಾದಿ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಈ ಎಲ್ಲ ಸೂಚನೆಗಳನ್ನು ನಾವು ಮೇಲಧಿಕಾರಿಗಳ ಆದೇಶದ ಮೇಲೆ ಪಾಲಿಸುತ್ತಿದ್ದೇವೆ ಎನ್ನುತ್ತಾರೆ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗೌಡ.