ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮಾವಾಸ್ಯೆ ಎಂದರೆ ಅದಕ್ಕೆ ವಿಶೇಷ ಮಹತ್ವವಿದೆ. ಆ ದಿನ ಪುಣ್ಯಕ್ಷೇತ್ರಗಳಲ್ಲಿ ತೀರ್ಥ ಸ್ನಾನ ಮಾಡಿದರೆ ವಿಶೇಷ ಫಲವಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರ ಹಾಗೂ ನರಹರಿ ಪರ್ವತ ಕ್ಷೇತ್ರಗಳಲ್ಲಿ ಪ್ರತಿ ವರ್ಷ ಆಟಿ ಅಮಾವಾಸ್ಯೆಯ ತೀರ್ಥಸ್ನಾನದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಮಾತ್ರ ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶವಿರಲಿಲ್ಲ. ಸೋಮವಾರ ಆಟಿ ಅಮಾವಾಸ್ಯೆ ಇದ್ದರೂ ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಭಕ್ತರಿಗೆ ಪುಣ್ಯಕ್ಷೇತ್ರಗಳಾದ ಕಾರಿಂಜ ಮತ್ತು ನರಹರಿ ಪರ್ವತ ಸನ್ನಿಧಿಯಲ್ಲಿ ತೀರ್ಥಸ್ನಾನದಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶವಿರಲಿಲ್ಲ. ಪ್ರತಿವರ್ಷ ಆಟಿ ಅಮಾವಾಸ್ಯೆಯ ದಿನ ಸಾವಿರಾರು ಭಕ್ತರಿಂದ ತುಂಬಿರುತ್ತಿದ್ದ ಈ ಎರಡು ಪುಣ್ಯ ಕ್ಷೇತ್ರಗಳು ಈ ಬಾರಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿತ್ತು.