ಕೊವಿಡ್-19 ಗೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕುರಿತು, ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ತುರ್ತು ಸಭೆ ನಡೆಸಿದರು.
ಸಭೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಾಸಕರುಗಳಾದ ವೇದವ್ಯಾಸ ಕಾಮತ್, ಹರೀಶ್ ಪುಂಜ, ಯು.ಟಿ.ಖಾದರ್ ಹಾಗೂ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮುಖಾಮುಖಿ ಮಾತನಾಡಿದ ಉಪ ಮುಖ್ಯ ಮಂತ್ರಿ, ಡಾ ಅಶ್ವತ್ಥನಾರಾಯಣ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿಕೆಯಂತೆ ಉಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಲು 25,000ರ Rapid antigen test kit ಗಳನ್ನು ಕೂಡಲೇ ಜಿಲ್ಲೆಗೆ ಸರಬರಾಜು ಮಾಡಲಾಗುವುದು ಹಾಗೂ 15 ಆಂಬುಲೆನ್ಸ್‌ಗಳನ್ನು ಕೂಡಲೇ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಕೋವಿಡ್-19 ಸೋಂಕಿತರು, ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದ ಕೂಡಲೇ, ಅಗತ್ಯವಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಹಾಗೂ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲು ಆದೇಶ ನೀಡುವುದಾಗಿ ತಿಳಿಸಿದರು.
ಇನ್ನು ಮುಂದೆ ಕೋವಿಡ್ -19 ಚಿಕಿತ್ಸೆಗೆ ಒಳಪಡುವವರು ಮತ್ತು ಕೋವಿಡ್-19 ಟೆಸ್ಟ್ ಮಾಡಿಕೊಳ್ಳಬೇಕಾದವರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ ಉಪಮುಖ್ಯಮಂತ್ರಿ, ಈ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.
ಈ ಮಹತ್ವದ ಸಭೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್-19 ಪೀಡಿತರ ಸಮಸೈಗಳು ಪರಿಹಾರ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.ಜಿಲ್ಲೆಯ ನೆರವಿಗೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ ನಾರಾಯಣ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.