ಜಿಲ್ಲೆಯಲ್ಲಿರುವ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇ.50ರಷ್ಟು ಲಕ್ಷಣರಹಿತರಿದ್ದು, ಇವರಿಗೆ ಮನೆಯಲ್ಲೇ ನಿಗಾವಣೆಯಲ್ಲಿರಿಸಲಾಗುತ್ತದೆ. ಸದ್ಯ ಮನೆಯಲ್ಲಿಯೇ ನಿಗಾವಣೆ ಯಲ್ಲಿರುವ ಕೋರೋನಾ ಸೋಂಕಿತರ ಸಹಾಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿಯವನ್ನು ತೆರೆಯಲಾಗಿದೆ.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಮುಖ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದ ಕೋವಿಡ್ ಸೋಂಕಿತರು ಅವರ ಮನೆಯಲ್ಲಿ ನಿಗಾವಣೆಯಲ್ಲಿ ಇರುವುದರಿಂದ ಅವರ ಮೇಲ್ವಿಚಾರಣೆಯನ್ನು ಸಹಾಯವಾಣಿ ಮೂಲಕ ಮಾಡಲಾಗುತ್ತದೆ. ರೋಗಿಗಳಿಗೆ ವೈದ್ಯರು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ, ಅವರಿಂದ ನಿರಂತರ ಮಾಹಿತಿ ಪಡೆಯಲಿದ್ದಾರೆ.
ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದ ಸೋಂಕಿತರಿಗಾಗಿ ಅವರ ಮನೆಯಲ್ಲಿರಲು ಸರಕಾರ ಅನುಮತಿ ನೀಡಿದೆ. ಅಂತಹವರ ಮೇಲ್ವಿಚಾರಣೆಯನ್ನು ಸಹಾಯವಾಣಿ ಮೂಲಕ ಮಾಡಲಾಗುತ್ತದೆ. ಈಗಾಗಲೇ ಬಂಟ್ವಾಳ, ಉಳ್ಳಾಲ, ಸೋಮೇಶ್ವರ, ಸುಳ್ಯ, ಪುತ್ತೂರು, ಮೂಡಬಿದ್ರೆ ನಗರ ಸಂಸ್ಥೆಗಳಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ. ಸುಳ್ಯ, ಪುತ್ತೂರು, ಮೂಡಬಿದ್ರೆ ಗಳಲ್ಲಿ ಕಡಿಮೆ ಸಂಖ್ಯೆಯ ರೋಗಿಗಳಿದ್ದು, ಬಂಟ್ವಾಳ ಉಳ್ಳಾಲ ಹಾಗೂ ಸೋಮೇಶ್ವರದಲ್ಲಿ ಅಧಿಕ ಸಂಖ್ಯೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಕೋವಿಡ್ ಸೋಂಕಿತರಿದ್ದಾರೆ. ಜಿಲ್ಲೆಯ ಕೆಲವು ನಗರ ವ್ಯಾಪ್ತಿಯಲ್ಲಿ ಕಡಿಮೆ ಸಂಖ್ಯೆಯ ಕೋವಿಡ್ ಸೋಂಕಿತರಿದ್ದು, ಈ ಸಹಾಯವಾಣಿ ಮೂಲಕ ಆಯಾ ತಾಲೂಕಿನ ಇಡೀ ವ್ಯಾಪ್ತಿಯಲ್ಲಿ ಕೂಡ ಸಹಾಯವಾಣಿ ನೆರವು ನೀಡಲು ಚಿಂತಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ತಿಳಿಸಿದ್ದಾರೆ.
ಈ ಸಹಾಯವಾಣಿಯಲ್ಲಿ ಪುರಸಭೆ ಸಿಬ್ಬಂದಿಗಳೊಂದಿಗೆ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಇರಲಿದ್ದು, ಮನೆಯಲ್ಲಿರುವ ರೋಗಿಗಳ ಆರೋಗ್ಯ ಮಾಹಿತಿಯನ್ನು ವಿಡಿಯೋ ಕಾಲ್ ಮೂಲಕ ಪಡೆಯಲಿದ್ದಾರೆ.