ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 26,242 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ. ಇವುಗಳ ಪೈಕಿ 3074 ಮಂದಿಗೆ ಸೋಂಕು ದೃಢಪಟ್ಟಿದೆ. 1725 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, 1278 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 311 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 115 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.50 ಲಕ್ಷಣರಹಿತರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಅವಕಾಶ ಇರುತ್ತದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಸ್ಥಳೀಯ ಸಂಸ್ಥೆಗಳಲ್ಲಿರುವ ದೂರವಾಣಿ ಹಾಗೂ ವಿಡಿಯೋ ಕಾಲ್ ಗಳಿಂದ ಸಂಪರ್ಕಿಸಲಾಗುತ್ತದೆ. ಸ್ಥಳೀಯ ವೈದ್ಯರ ನೆರವಿನಿಂದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಕೋವಿಡ್ ಕುಂದು ಕೊರತೆಗಳನ್ನು ಗಮನಿಸಲು ಪಿಜಿಆರ್ ಸೆಲ್ ಸ್ಥಾಪಿಸಲಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆಂಬುಲೆನ್ಸ್ ಸಂಬಂಧಿತ ಮಾಹಿತಿಗೆ 108 ಮತ್ತು 1077 ಸಂಖ್ಯೆ ಅಥವಾ 0824 2441444 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಇಂದು 8 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಏಳು ಮಂದಿ ಪುರುಷರು ಹಾಗೂ ಓರ್ವ ಮಹಿಳೆ. 53, 56, 65, 68, 69, 70 ಹಾಗೂ 72 ವರ್ಷದ ಏಳು ಮಂದಿ ಪುರುಷರು ಸಾವನ್ನಪ್ಪಿದ್ದು, 72 ವರ್ಷದ ಓರ್ವ ಮಹಿಳೆ ಮೃತಪಟ್ಟಿದ್ದಾಗಿ ಜಿಲ್ಲಾಧಿಕಾರಿಗಳ ಕೋವಿಡ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇವರ ಸಾವು ಯಾವ ರೀತಿ ಸಂಭವಿಸಿದ್ದು ಎಂಬ ಕುರಿತು ತಜ್ಞರ ಸಮಿತಿಗೆ ವರದಿ ನೀಡಲು ತಿಳಿಸಲಾಗಿದೆ.