ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಕಾಲದ ಬಳಿಕ ಸೋಂಕಿತರ ಸಂಖ್ಯೆ ಗುಣಮುಖರಾಗಿ ಮನೆಗೆ ತೆರಳುವವರ ಸಂಖ್ಯೆಗಿಂತ ಕಮ್ಮಿ ಇದೆ. ಇಂದು 73 ಮಂದಿಗೆ ಸೋಂಕು ದೃಢಪಟ್ಟರೆ, 104 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1379 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 1089 ಮಂದಿ ಗುಣಮುಖರಾದಂತಾಗಿದೆ. ಇದುವರೆಗೆ 25,265 ಮಂದಿಯ ಪರೀಕ್ಷೆಯಲ್ಲಿ 2525 ಮಂದಿಗೆ ಸೋಂಕು ತಗಲಿದೆ. ಬಂಟ್ವಾಳ ತಾಲೂಕಿನ 8 ಮಂದಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಫರಂಗಿಪೇಟೆಯ ಇಬ್ಬರು, ವಿಟ್ಲದ ಒಬ್ಬರು, ಮಂಜನಾಡಿಯ ಒಬ್ಬರು, ಪಾಣೆಮಂಗಳೂರಿನ ಇಬ್ಬರು, ಬಂಟ್ವಾಳದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ನರಿಕೊಂಬು ಗ್ರಾಮದಲ್ಲಿ ಮಂಗಳವಾರ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯ ಪತ್ನಿಗೂ ಇಂದು ಸೋಂಕು ದೃಢಪಟ್ಟಿದೆ.
ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಬಂಟ್ವಾಳ ತಾಲೂಕಿನವರು ಮತ್ತು ಒಬ್ಬರು ಸುಳ್ಯ ತಾಲೂಕಿನವರು ಸಾವನ್ನಪ್ಪಿದ್ದಾರೆ.ಸುಳ್ಯ ತಾಲೂಕಿನ 60 ವರ್ಷದ ಮಹಿಳೆ, ಬಂಟ್ವಾಳ ತಾಲೂಕು ಒಕ್ಕೆತ್ತೂರಿನ 73 ವರ್ಷದ ಪುರುಷ, ಬಂಟ್ವಾಳ ಪಾಣೆಮಂಗಳೂರು ಸಮೀಪ ಜೈನರಪೇಟೆಯ 70 ವರ್ಷದ ಪುರುಷ ಮತ್ತು ನರಿಂಗಾಣದ 68 ವರ್ಷದ ಮಹಿಳೆ ಮೃತಪಟ್ಟವರು. ಇದೀಗ ಜಿಲ್ಲಾಧಿಕಾರಿ ಹೊರಡಿಸಿದ ಕೋವಿಡ್ ಸಂಬಂಧಿಸಿದ ಪ್ರಕಟಣೆಯಲ್ಲಿ ಈ ಮೂವರು ಮೃತಪಟ್ಟಿರುವ ಕುರಿತು ಮಾಹಿತಿಯನ್ನು ನೀಡಿದ್ದು, ಮರಣ ಪ್ರಕರಣಗಳ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.