ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟು ಮಧ್ಯಾಹ್ನದ ಬಳಿಕ ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಮಾಡಿರುವ ಮನವಿಗೆ ವರ್ತಕರು, ಅಟೋ ರಿಕ್ಷಾ, ಗೂಡ್ಸ್ ವಾಹನ ಹಾಗೂ ಗ್ರಾಮಸ್ಥರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗ್ರಾಮದಲ್ಲಿ ಒಟ್ಟು 26 ಮಂದಿಗೆ ಕೊರೋನ ಸೋಂಕು ಪಾಸಿಟಿವ್ ಅಗಿದ್ದು ಗ್ರಾಮದಲ್ಲಿ ಅತಂಕ ಮನೆ ಮಾಡಿದೆ.
ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬಾರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿರುವ ರಮ್ಲಾನ್ ಮಾರಿಪಳ್ಳ, ಎಲ್ಲರ ಸಹಕಾರದಿಂದ ಮಾತ್ರ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾಧ್ಯ ಎಂದಿದ್ದಾರೆ.
ಗ್ರಾಮದಲ್ಲಿ ಸೋಂಕು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ಥಳೀಯ ವರ್ತಕರು, ಆಟೋ ಚಾಲಕರು ಸೇರಿದಂತೆ ಎಲ್ಲರಲ್ಲೂ ೧೪ ದಿನಗಳ ಕಾಲ ಮಧ್ಯಾಹ್ನ ೨ ಗಂಟೆಯ ಬಳಿಕ ಬಂದ್ ನಡೆಸುವಂತೆ ಮನವಿ ಮಾಡಲಾಗಿತ್ತು. ಕ್ಲಿನಿಕ್‌ಗಳು ಹಾಗೂ ಮೆಡಿಕಲ್‌ಗಳು ಹೊರತು ಪಡಿಸಿ ಉಳಿದವು ಬಂದ್ ಆಗಿತ್ತು. ಇಂದು ಎರಡು ಕುಟುಂಬಗಳ 16 ಮಂದಿಗೆ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.