ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯವರಾದ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಂದಾಯ ನೌಕರರ ಸಂಘದ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬಂಟ್ವಾಳ ತಾಲೂಕು ತಹಸೀಲ್ದಾರ್ ರಶ್ಮಿ ಎಸ್.ಆರ್. ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ. ಎಸ್. ಆರ್, ಇದು ಅತ್ಯಂತ ಗಂಭೀರ ವಿಷಯವಾಗಿದ್ದು ಸರ್ಕಾರದ ಪರವಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪಾಣೆಮಂಗಳೂರು ಹೋಬಳಿಯ ಕಂದಾಯ ನಿರೀಕ್ಷಕರಾದ ರಾಮ ಮಾತನಾಡಿ, ಇದೊಂದು ಘೋರ ಕೃತ್ಯವಾಗಿದ್ದು ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು . ಬಂಟ್ವಾಳ ತಾಲೂಕು ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷರಾದ ತೌಫೀಕ್ ಮನವಿಯನ್ನು ಓದಿ ತಹಸೀಲ್ದಾರರಿಗೆ ಹಸ್ತಾಂತರಿಸಿದರು.
ಇದೇ ಸಮಯದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಂದಾಯ ನೌಕರ ಸಂಘದ ಉಪಾಧ್ಯಕ್ಷರಾದ ಜೆ ಜನಾರ್ಧನ್ ಮತ್ತು ತಾಲೂಕು ಕಚೇರಿಯ ಉಪತಹಸೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಭೂಮಾಪನ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.