ಬಂಟ್ವಾಳ ಎಸ್.ವಿ.ಎಸ್. ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಹತ್ತನೇ ತರಗತಿಯನ್ನು ಕಲಿಯುತ್ತಿರುವ ಈ ಬಾಲಕನ ಹೆಸರು ಕೌಶಿಕ್. ತಂದೆ ರಾಜೇಶ್ ಆಚಾರ್ಯ, ತಾಯಿ ಜಲಜಾಕ್ಷಿ ಆಚಾರ್ಯ. ಮನೆ ಬಂಟ್ವಾಳ ಬಸ್ತಿಪಡ್ಪುವಿನ ಕಂಚಿಗಾರಪೇಟೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಾಮಾನ್ಯವಾಗಿ ಅಂಗವೈಕಲ್ಯದ ಮಕ್ಕಳಿಗೆ ಸಹಾಯಕನನ್ನು ಇಟ್ಟುಕೊಳ್ಳುವ ಅವಕಾಶ ಇರುತ್ತದೆ. ಆದರೆ ಕೌಶಿಕ್ ಎಲ್ಲವನ್ನೂ ನಿರಾಕರಿಸಿದ. ನಿನ್ನೆ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಸುಲಲಿತವಾಗಿ ಬರೆದ. ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿತ್ತು. ಶುಕ್ರವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ವೇಳೆ ಪೊಳಲಿಯಲ್ಲಿ ಕೌಶಿಕ್ ನನ್ನು ಭೇಟಿಯಾದ ಸಚಿವರು, ಈ ವೇಳೆ ಕಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ಕೌಶಿಕ್ ನನ್ನು ದೇವಸ್ಥಾನದ ಪ್ರವೇಶ ದ್ವಾರದ ಬಳಿ ಭೇಟಿ ಆತನ ಜತೆ ಉಭಯ ಕುಶಲೋಪರಿ ವಿಚಾರಿಸಿದರು. ನೀನೇ ನಮಗೆ ಸ್ಪೂರ್ತಿ ಎಂದು ಆತನ ಪಠ್ಯೇತರ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಯಾವ ಪರೀಕ್ಷೆ ಹೇಗಿತ್ತು ಎಂಬ ಮಾಹಿತಿ ಕೇಳಿದರು. ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದರು. ಬಳಿಕ ತಮ್ಮ ಆಪ್ತ ಸಹಾಯಕನನ್ನು ಕರೆದು ಪೋಟೊ ತೆಗೆಸಿಕೊಂಡರು.
ಕೌಶಿಕ್ ಕುರಿತು ಬಂಟ್ವಾಳನ್ಯೂಸ್ ನಲ್ಲಿ ಹಿಂದೆ ಪ್ರಕಟಿತ ವರದಿ ಇದು.