ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಅದೇ ರೀತಿ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, ಇಂದು ಒಬ್ಬರು ಮೃತಪಟ್ಟಿದ್ದು, ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ ನೀಡುವ ಲೆಕ್ಕಾಚಾರದ ಪ್ರಕಾರ, 20,89,649 ಜನಸಂಖ್ಯೆಯಲ್ಲಿ 1,709 ಮಂದಿಗೆ ಸೋಂಕು ತಗಲಿದ್ದು, ಜನಸಂಖ್ಯೆ ಆಧರಿಸಿದರೆ ಪ್ರಮಾಣದ ಶೇಕಡಾವಾರು 0.081. ಆದರೆ ಗಂಟಲು ದ್ರವ ಮಾದರಿಯ ಪರೀಕ್ಷೆ 22,481 ಮಂದಿಯನ್ನಷ್ಟೇ ಮಾಡಿದ್ದು, ಅವರಲ್ಲಿ 1709 ಮಂದಿಗೆ ಸೋಂಕು ತಗಲಿದೆ ಎಂಬುದೂ ಗಮನಾರ್ಹ. ಇದರ ಶೇಕಡಾವಾರು ತೆಗೆದರೆ, ಪರೀಕ್ಷೆಗೊಳಪಟ್ಟ ಶೇ.7.6 ಮಂದಿಗೆ ಸೋಂಕಿದೆ. ಒಟ್ಟು 702 ಮಂದಿ ಸೋಂಕಿತರು ಗುಣಮುಖರಾಗಿರುವುದು ಸಮಾಧಾನಕರ ಅಂಶವಾದರೆ, ಇನ್ನೂ 977 ಮಂದಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಐಸಿಯುನಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೇಟೆ, ಹಳ್ಳಿ ಎನ್ನದೆ ಎಲ್ಲ ಪ್ರದೇಶಗಳಲ್ಲೂ ಕೊರೊನಾ ವೈರಸ್ ಬಾಧಿತರು ಇರುವುದು ಇಲ್ಲಿ ಗಮನಾರ್ಹ.