ಮಂಗಳೂರಿನ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ಮನೆಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸಫ್ವಾನ್ (16) ಮತ್ತು ಸಹಲಾ ( 10) ಸಾವನ್ನಪ್ಪಿದವರು. ಭಾರಿ ಮಳೆಗೆ ಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮವಾಗಿತ್ತು. ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಭಾನುವಾರ ಭಾರಿ ಮಳೆಯ ಕಾರಣದಿಂದ ಗುಡ್ಡದ ಮಣ್ಣು ಜರಿದು, ಮರಗಳ ಸಹಿತ ಬಿದ್ದಿದೆ. ಹೀಗಾಗಿ ನಾಲ್ಕು ಮನೆಗಳು ನೆಲಸಮವಾಗಿದೆ. ಮಣ್ಣಿನಡಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯಲು ಜಿಲ್ಲಾಡಳಿತ, ಅಗ್ನಿಶಾಮಕ, ಹೋಂ ಗಾರ್ಡ್, ಎನ್ ಡಿಆರ್ ಎಫ್ ತಂಡದೊಂದಿಗೆ ಸ್ಥಳೀಯರು ಕಾರ್ಯಚರಣೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ: ಮೃತ ಮಕ್ಕಳ ಕುಟುಂಬಕ್ಕೆ ಸಿಎಂ ಯಡಿಯೂರಪ್ಪ ಪರಿಹಾರ ಧನ ಘೋಷಿಸಿದ್ದು, ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಗುಡ್ಡ ಪ್ರದೇಶದಲ್ಲಿದ್ದ 19 ಮನೆಗಳ ಸ್ಥಳಾಂತರಕ್ಕೆ ಸೂಚನೆಯನ್ನು ಅವರು ನೀಡಿದ್ದಾರೆ.
10 ಲಕ್ಷ ನೀಡಿ: ದುರ್ಘಟನೆ ಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳು ತೀರಾ ಬಡವರಾಗಿದ್ದು ವಸತಿ ವ್ಯವಸ್ಥೆಯಲ್ಲದೇ ಮೃತಪಟ್ಟವರಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಪ್ರದಾನ ಕಾರ್ಯದರ್ಶಿ ಹಾರೂನ್ ರಶೀದ್ ಆಗ್ರಹಿಸಿದ್ದಾರೆ