ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಸದಸ್ಯರ ನಿರಂತರ ಶ್ರಮದಾನದ ಮೂಲಕ ನಿರ್ಮಾಣಗೊಂಡ ಸಜೀಪಮೂಡ ಗ್ರಾಮದ ಕಂದೂರಿನ ಬಡಮಹಿಳೆ ಕಮಲ ಅವರ ಮನೆಯ ಗೃಹಪ್ರವೇಶ ಭಾನುವಾರ ನಡೆಯಿತು.
ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ ಕುಂಭ ಕುಟೀರ ಶಿಲಾಫಲಕ ಅನಾರಣಗೊಳಿಸುವ ಮೂಲಕ ನೂತನವಾಗಿ ನಿರ್ಮಾಣಗೊಂಡ ಮನೆಯನ್ನು ಉದ್ಘಾಟಿಸಿದರು. ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಸಮಾರಂಭ ನಡೆಯಿತು. ಬಳಿಕ ಮನೆಯ ಕೀಲಿ ಕೈ ನೀಡುವ ಮೂಲಕ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮನೆಯನ್ನು ಕಮಲಾ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಕಂದೂರಿನಲ್ಲಿ ಸ್ವಂತ ಜಮೀನು ಹಾಗೂ ಮನೆ ಇದ್ದರೂ ಕೂಡ ಕಮಲ ಅವರು ಕಾರಣಂತರಗಳಿಂದ ಮಣಿನಾಲ್ಕೂರು ಗ್ರಾಮದ ಕುಂಟಾಲಪಲ್ಕೆಯಲ್ಲಿ ಬಾಡಿಗೆ ಮನೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಯುವಕರು ಕುಲಾಲ ಕುಂಬಾರ ಯುವ ವೇದಿಕೆಯ ಗಮನಕ್ಕೆ ತಂದಾಗ ಮನೆಮಂದಿಯನ್ನು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಕಂದೂರಿನ ಮನೆಯ ಪುನರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಕರೋನಾ ಲಾಕ್‌ಡೌನ್‌ನ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡ ಯುವ ವೇದಿಕೆಯ ಸದಸ್ಯರು ದಾನಿಗಳ ನೆರವಿನೊಂದಿಗೆ ಎಂಟು ದಿನಗಳ ಕಾಲ ಶ್ರಮದಾನ ನಡೆಸಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ.