ಕಲ್ಲಡ್ಕದ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ ಕಚೇರಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೋಶಾಧಿಕಾರಿ ವಜ್ರನಾಥ ಕಲ್ಲಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಯತಿನ್ ಕುಮಾರ್ ನುಡಿನಮನ ಸಲ್ಲಿಸಿ, ನಮ್ಮ ಪೀಳಿಗೆ ನೆಮ್ಮದಿಯ ನಾಳೆಗೆ ಸಾವನ್ನು ಲೆಕ್ಕಿಸದೆ ಪ್ರಾಣಾರ್ಪಣೆ ಮಾಡಿದ ಸೈನಿಕರಿಗೆ ಶ್ರದ್ಧಾಂಜಲಿಯಲ್ಲದೆ ಮತ್ತೇನನ್ನೂ ಸಲ್ಲಿಸಲು ಸಾಧ್ಯವಿಲ್ಲ. ನಮ್ಮನ್ನು ದಿನದ ಇಪ್ಪತ್ತನಾಲ್ಕು ತಾಸು ಕಾಯುವ ಸೈನಿಕರು ಕುಟುಂಬದ ಭವಿಷ್ಯದ ಬಗ್ಗೆ ಯೋಚಿಸದೆ ದೇಶದ ಕುರಿತು ಚಿಂತಿಸುತ್ತಾರೆ. ಅವರಿಗೆ ಜೀವನ ಪೂರ್ತಿ ಕೃತಜ್ಞರಾಗಿರಬೇಕಾದದ್ದು ನಮ್ಮ ಧರ್ಮ ಎಂದರು. ಉತ್ಸವ ಸಮಿತಿಯ ದಿನೇಶ್ ಕೃಷ್ಣಕೋಡಿ ಮಾತನಾಡಿ, ಚೀನಾದ ಆರ್ಥಿಕ ವ್ಯವಸ್ಥೆಗೆ ನಾವು ಮಾಡುವ ಸಹಕಾರ ನಿಲ್ಲಿಸದಿದ್ದರೆ ನಾವು ನಮ್ಮ ಸೈನಿಕರಿಗೆ ದ್ರೋಹ ಬಗೆದಂತೆ ಎಂದು ಎಚ್ಚರಿಸಿದರು. ಈ ವೇಳೆ ಸ್ವದೇಶಿ ಸಂಕಲ್ಪ ಮಾಡಲಾಯಿತು. ಪುಷ್ಪಾರ್ಚನೆ ಸಲ್ಲಿಸಿ ದೇವಸಾಯುಜ್ಯ ಹೊಂದಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರತಿಷ್ಠಾನದ ದಿನೇಶ್ ರಾಮನಗರ, ಗಣೇಶ್ ಶೆಟ್ಟಿ, ಮತ್ತು ಉತ್ಸವ ಸಮಿತಿಯ ಸತೀಶ್ ಆಚಾರ್ಯ, ಯೋಗೀಶ್, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.