ಕೃಷ್ಣಾಪುರ ನೈತಂಗಡಿ ಎಂಬಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಸ್ಥಳೀಯ ಯುವಕನೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸ್ಥಳೀಯ ನಿವಾಸಿ ತಾರನಾಥ್ ಎಂಬವರ ಪುತ್ರ ಸಂತೋಷ್ ದೇವಾಡಿಗ (22) ಎಂದು ಗುರುತಿಸಲಾಗಿದೆ.
ಸಂತೋಷ್ ಶನಿವಾರ ಮಧ್ಯಾಹ್ನ ಕೃಷ್ಣಾಪುರ ಬಳಿಯ ಕೆರೆಯಲ್ಲಿ ತನ್ನ ನಾಲ್ವರು ಗೆಳೆಯರ ಜೊತೆ ಈಜಲು ತೆರಳಿದ್ದರು. ಕಲ್ಲಿನ ಪಕ್ಕದಲ್ಲೇ ಈಜಾಡುತ್ತಿದ್ದ ವೇಳೆ ಕಾಲುಜಾರಿ ನೀರಿನಾಳಕ್ಕೆ ಬಿದ್ದು ಮೇಲೆಬರಲಾಗದೇ ಸ್ನೇಹಿತರ ಕಣ್ಣೆದುರೇ ಮುಳುಗಿದ್ದಾನೆ. ಸಂತೋಷ್ ಮುಳುಗುವುದನ್ನು ಕಂಡು ಸ್ನೇಹಿತರು ಬೊಬ್ಬೆ ಹೊಡೆದಿದ್ದು ಸ್ಥಳೀಯರು ಸ್ಥಳಕ್ಕಾಗಮಿಸಿ ರಕ್ಷಿಸಲು ಯತ್ನಿಸಿದರೂ ಬದುಕುಳಿಸಲಾಗಲಿಲ್ಲ.