ವಿದ್ಯಾರ್ಥಿಗಳ ಶಿಕ್ಷಣ ಸಾಲದ ಬಡ್ಡಿ ಮನ್ನಾ ಮತ್ತು ಶಿಕ್ಷಣ ಸಾಲದ ಮರುಪಾವತಿ ಅವಧಿ ಮುಂದೂಡುವಂತೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಒತ್ತಾಯಿಸಿದ್ದಾರೆ.
ದೇಶದ ಆರ್ಥಿಕತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಕೋವಿಡ್ ಸೋಂಕಿನಿಂದಾಗಿ ಜನರ ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಶಿಕ್ಷಣಕ್ಕಾಗಿ ಸಾಲ ಪಡೆದು, ವಿದ್ಯಾಭ್ಯಾಸ ಮಾಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ, ಉದ್ಯೋಗಕ್ಕೆ ಊರಿಂದ ಊರಿಗೆ ಅಲೆದಾಡುವಂತಾಗಿದೆ. ಕೊರೊನಾ ಸೋಂಕಿನಿಂದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗೂ ಹೆತ್ತವರಿಗೆ ಯಾವುದೇ ರೀತಿಯ ಆದಾಯ ಇಲ್ಲದೆ ಆರ್ಥಿಕ ಪರಿಸ್ಥಿತಿಯಿಂದಾಗಿ ಕಂಗೆಟ್ಟಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಸಾಲ ಕಟ್ಟಲಾಗದೆ ಚಿಂತೆಗೀಡಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕನಿಷ್ಠ ಒಂದು ವರ್ಷದ ವರೆಗೆ ಶಿಕ್ಷಣ ಸಾಲದ ಮೇಲಿನ ಬಡ್ಡಿ ಹಾಗೂ ಶಿಕ್ಷಣ ಸಾಲ ಪಡೆದು ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳ ಒಂದು ವರ್ಷದ ಬ್ಯಾಂಕಿನ ತಿಂಗಳ ಮರುಪಾವತಿ ಅವಧಿ ಮಾರ್ಚ್ 2020ರಿಂದ ಏಪ್ರಿಲ್ 2021ರವರೆಗೆ ಮುಂದೂಡಬೇಕು ಎಂದವರು ಒತ್ತಾಯಿಸಿದ್ದಾರೆ.