ಕವರ್ ಸ್ಟೋರಿ

ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಸೈಡ್ ಇಂಚಿಂಚೂ ಅಪಾಯಕಾರಿ – ಬಾಯಿತೆರೆದಿದೆ ಹೊಂಡಗಳು

ಬಿ.ಸಿ.ರೋಡ್ ಸರ್ವೀಸ್ ರಸ್ತೆ ಕೆಲಸ ಆರಂಭದಿಂದ ಇದುವರೆಗೂ www.bantwalnews.com ಅಲ್ಲಿ ಜನರಿಗೆ ಬೇಕಾಗುವ ವಿಚಾರವನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಿತ್ತು. ಆದರೂ ಹಲವು ಸಮಸ್ಯೆಗಳು ಹಾಗೆಯೇ ಉಳಿದಿವೆ. ಭವಿಷ್ಯದಲ್ಲಿ ಬಿ.ಸಿ.ರೋಡ್ ಬ್ಯುಟಿಫಿಕೇಶನ್ ಎಂಬ ನಗರ ಸೌಂದರ್ಯೀಕರಣವಾಗುವ ಸಂದರ್ಭ ಎಲ್ಲವೂ ಸರಿಯಾಗುತ್ತದೆ ಎಂಬ ಆಶೆಯಿಂದ ಕಷ್ಟವಾದರೂ ಸಹಿಸಿಕೊಂಡು ಜನರಿದ್ದಾರೆ. ಆದರೆ ತುರ್ತು ಆಗಬೇಕಾದ ಸಮಸ್ಯೆಯ ಕುರಿತು ಓದುಗರು ಬಂಟ್ವಾಳನ್ಯೂಸ್ ಗಮನ ಸೆಳೆದಿದ್ದಾರೆ. ಅದು ಹೀಗಿದೆ. ನೋಡಿ.

ಬಿ.ಸಿ.ರೋಡ್ ಸರ್ವೀಸ್ ರಸ್ತೆಯಿಂದ ಕೈಕುಂಜೆ ಸಂಪರ್ಕಿಸುವ ಭಾಗದಲ್ಲಿ ಹೊಂಡವೊಂದು ಕಳೆದ ಕೆಲ ತಿಂಗಳಿಂದ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಮಂಗಳೂರು ಬಸ್ ನಿಲ್ಲುವ ಜಾಗದಲ್ಲಿ, ಕೈಕುಂಜೆ ಕಡೆಗೆ ತಿರುಗುವ ಭಾಗದಲ್ಲಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಅಪಾಯಕಾರಿ ಹೊಂಡಗಳಿವೆ.

ಇದರ ಕುರಿತು ಸ್ಥಳೀಯ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭವೇ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಈಗಲೂ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಸಮಸ್ಯೆಯಾಗುತ್ತದೆ. ಸರಿಯಾದ ಫುಟ್ ಪಾತ್ ಗಳು ಇನ್ನೂ ನಿರ್ಮಾಣವಾಗಿಲ್ಲ. ಇದರೊಂದಿಗೆ ಕೆಲವೆಡೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಮುಂದುವರಿಸಿಲ್ಲ.

ಇದೇ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ವಾಹನ ನಿತ್ಯ ಸಂಚರಿಸುತ್ತದೆ. ಪೊಲೀಸ್ ಸ್ಟೇಶನ್, ಮಿನಿ ವಿಧಾನಸೌಧ, ಶಾಸಕರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಮೆಸ್ಕಾಂ, ತೋಟಗಾರಿಕೆ, ಕೃಷಿ, ಎಪಿಎಂಸಿ ಇಲಾಖೆಗಳು, ಕೋರ್ಟ್ ಸಹಿತ ಹಲವು ಕಚೇರಿಗಳಿಗೆ ಹೋಗಬೇಕಾದರೆ ಈ ಹೊಂಡದ ಪಕ್ಕದಲ್ಲೇ ಹೋಗಬೇಕು. ಆದರೆ ತೀರಾ ಸಣ್ಣ ಕೆಲಸವಾದ ಹೊಂಡವನ್ನು ಮುಚ್ಚಿಸಿ ರಸ್ತೆಯನ್ನು ಸುಸ್ಥಿತಿಗೆ ತರುವ ಕಾರ್ಯವನ್ನು ಸಂಬಂಧಪಟ್ಟವರು ನಡೆಸಲು ಮರೆತಿದ್ದಾರೆ. ಅದರ ಪರಿಣಾಮ ಶುಕ್ರವಾರ ಮಹಿಳೆಯೊಬ್ಬರು ದ್ವಿಚಕ್ರವಾಹನದಲ್ಲಿ ಸಂಚರಿಸುವ ಸಂದರ್ಭ ಅನುಭವಿಸಿದ್ದಾರೆ. ಸರ್ವೀಸ್ ರಸ್ತೆಯಿಂದ ಪೊಲೀಸ್ ಸ್ಟೇಶನ್ ರಸ್ತೆ ಕಡೆ ತಿರುಗುವ ವೇಳೆ ಹೊಂಡದಲ್ಲಿ ಆಯತಪ್ಪಿ ವಾಹನ ಬಿದ್ದಿದೆ. ಈಗ ಬಸ್ಸುಗಳ ಸಂಚಾರ ಕಡಿಮೆ. ಸಂಚಾರದಟ್ಟಣೆಯೂ ಇಲ್ಲ. ಹೊಂಡ ಮುಚ್ಚಲು ಇನ್ಯಾವ ಮುಹೂರ್ತ, ಘಳಿಗೆ ಬೇಕೋ ದೇವರೇ ಬಲ್ಲ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ