ಬಿಜೆಪಿ ನಾಯಕ ಕೆ.ಹರಿಕೃಷ್ಣ ಬಂಟ್ವಾಳ ಅವರನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಅಧ್ಯಕ್ಷರ ಹುದ್ದೆಗೆ ನೇಮಿಸಲಾಗಿದೆ. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ ಅವರು ಸರ್ಕಾರದ ಪರವಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಜೂನ್ 12ರಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸುದೀರ್ಘ ರಾಜಕೀಯ ಪಯಣ ನಡೆಸಿರುವ ಕೆ.ಹರಿಕೃಷ್ಣ ಬಂಟ್ವಾಳ್ ಅವರು ಕಳೆದ ಚುನಾವಣೆ ವೇಳೆ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಕ್ಷೇತ್ರದಲ್ಲಿ ವಿಜಯಿಯಾಗುವಲ್ಲಿ ಹಾಗೂ ಬಳಿಕ ನಳಿನ್ ಅವರ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದವರು. ಬಳಿಕ ಬಿಜೆಪಿಯಲ್ಲಿ ಜಿಲ್ಲಾ ಮಟ್ಟದ ಹುದ್ದೆಗಳನ್ನು ಅಲಂಕರಿಸಿದ ಬಂಟ್ವಾಳ್, ಪ್ರಖರ ಭಾಷಣಗಳಿಗೆ ಹೆಸರುವಾಸಿ. ಬಿಲ್ಲವ ಸಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ದುಡಿದಿರುವ ಬಂಟ್ವಾಳ್ ಅವರಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊಡಮಾಡುವ ನಿಗಮ ಹುದ್ದೆ ದೊರಕಿದೆ. ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಬಳಿಕ ಪಕ್ಷದ ಜಿಲ್ಲಾ ವಕ್ತಾರ, ಬಳಿಕ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದೀಗ ಕಿಯೋನಿಕ್ಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶಾಸಕ ರಾಜೇಶ್ ನಾಯ್ಕ್, ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕೋರಿಕೆಯಂತೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂಟ್ವಾಳ್ ಅವರನ್ನು ನಿಗಮ ಅಧ್ಯಕ್ಷರನ್ನಾಗಿ ನೇಮಿಸಲು ಆದೇಶಿಸಿದ್ದಾರೆ.