ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವರನ್ನು ರಕ್ಷಿಸಲು ನಾಡದೋಣಿ ಬೇಕು ಎನ್ನುವ ಪಾಣೆಮಂಗಳೂರು ಪರಿಸರದ ಈಜುಗಾರರ ಹಲವು ವರ್ಷದ ಬೇಡಿಕೆ ಕೊನೆಗೂ ಈಡೇರಿದೆ. ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ, ಏರ್ಯ ಬಾಲಕೃಷ್ಣ ಹೆಗ್ಡೆ ಮತ್ತಿತರರ ಸಹಕಾರದೊಂದಿಗೆ ಅಂದಾಜು 70 ಸಾವಿರ ರೂಪಾಯಿ ಮೌಲ್ಯದ ಹೊಸ ನಾಡ ದೋಣಿಯನ್ನು ಈ ಈಜುಗಾರರಿಗೆ ನೀಡಿದೆ. ಗುರುವಾರ ಬೆಳಿಗ್ಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಸಭಾಭವನದಲ್ಲಿ ಸೇವಾಂಜಲಿ ರಕ್ಷಕ ನಾಮಾಂಕಿತ ದೋಣಿಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ದೋಣಿ ಹಸ್ತಾಂತರ ಮಾಡಿದರು. ಅವರು ಮಾತನಾಡಿ ಜಾತಿ ಧರ್ಮ ನೋಡದೆ ಈ ಈಜುಗಾರರು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಇವರು ತಾಲೂಕಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ. ಇವರ ಸೇವೆ ಮುಂದಿನ ದಿನಗಳಲ್ಲಿಯೂ ತಾಲೂಕಾಡಳಿತ ಹಾಗೂ ಎಲ್ಲರಿಗೂ ಅಗತ್ಯವಿದೆ ಎಂದು ಶುಭ ಹಾರೈಸಿದರು.
ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಅವರು ಲೈಫ್ ಜಾಕೆಟ್ ವಿತರಿಸಿದರು. ಅವರು ಮಾತನಾಡಿ ಯಾವ ಉದ್ದೇಶಕ್ಕೆ ದೋಣಿಯನ್ನು ನೀಡಲಾಗಿದೆಯೋ ಆ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಸೇವಾಂಜಲಿ ಪ್ರತಿಷ್ಠಾನ ಮಾನವೀಯ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದು ಇನ್ನೂ ಮುಂದುವರಿಯಲಿ ಎಂದರು. ಕಾರ್ಯಕ್ರಮದಲ್ಲಿ ಪ್ರಾಣ ರಕ್ಷಕ ಯುವಕರನ್ನು ಸನ್ಮಾನಿಸಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಅಧ್ಯಕ್ಷ ವಜ್ರನಾಭ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಪ್ರಕಾಶ್ ಕಾರಂತ್, ಅಮ್ಮುಂಜೆಗುತ್ತು ದೇವದಾಸ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಪಿ.ಎ. ರಹೀಂ. ಪುದು ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಾನಂದ ಆಳ್ವ ಕಂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಪಿ.ಎ. ರಹೀಂ ಪ್ರಾಸ್ತವಿಕವಾಗಿ ಮಾತನಾಡಿದರು. ತೇವು ತಾರಾನಾಥ ಕೊಟ್ಟಾರಿ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.