ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ಏರ್ಪಡಿಸಿದ ರಾಷ್ಟ್ರೀಯ ಮಟ್ಟದ ವರ್ಚುವಲ್ ಮಿಕ್ಸೆಡ್ ಮಾರ್ಷಲ್ ಆರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲುವಿನ ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಎಂ. ಅವರಿಗೆ ನಗದು ಪುರಸ್ಕಾರ ದೊರಕಿದೆ.ವಿಡಿಯೋ ಸ್ಪರ್ಧಾ ಕೂಟದಲ್ಲಿ ತನ್ನ ವಿಶಿಷ್ಠ ಪೈಟಿಂಗ್ ಭಂಗಿಗಳನ್ನು ಪ್ರದರ್ಶಿಸಿರುವ ರಾಜೇಶ್ ಎಂ. ಹಾಗೂ ವೆನಿಲ್ಲಾ ಮಣಿಕಂಠ ಅವರು ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದು ರಾಜೇಶ್ ಅವರು 10 ಸಾವಿರ ರೂಪಾಯಿ ನಗದು ಪುರಸ್ಕಾರ ಪಡೆದಿದ್ದಾರೆ. ಇದೇ ವೇಳೆ ಅವರ ಶಿಷ್ಯೆ ವೆನಿಲ್ಲಾ ಮಣಿಕಂಠ ಅವರಿಗೆ 5 ಸಾವಿರ ರೂಪಾಯಿ ನಗದು ವಿಶೇಷ ಪುರಸ್ಕಾರವೂ ಲಭ್ಯವಾಗಿದೆ.
ಲಾಕ್‌ಡೌನ್ ಸಂದರ್ಭಲ್ಲಿ ಐಮಾ( ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್) ವಿಡಿಯೋ ಮೂಲಕ ಮಿಕ್ಸೆಡ್ ಮಾರ್ಷಲ್ ಆರ್ಟ್ ಸ್ಪರ್ಧಾ ಕೂಟ ಆಯೋಜಿಸಿದ್ದು ದೇಶದ ವಿವಿಧ ರಾಜ್ಯಗಳ ಮಾರ್ಷಲ್ ಆರ್ಟ್ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು. ಫೈಟ್ ಮೋಟಿವೇಷನ್ ವಿಭಾಗದಲ್ಲಿ ರಾಜೇಶ್ ಎಂ. ಹಾಗೂ ವೆನಿಲ್ಲಾ ಮಣಿಕಂಠ ಪ್ರದರ್ಶಿಸಿದ ಸ್ಟಂಟ್‌ಗಳಿರುವ ವಿಡಿಯೋ ಅಂತರಾಷ್ಟ್ರೀಯ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತುದಾರರಾಗಿರುವಂತಹ ರಾಜೇಶ್ ಅವರು ಜೂಡೋನಲ್ಲಿ ಬ್ಲಾಕ್‌ಬೆಲ್ಟ್, ಮಿಕ್ಸೆಡ್ ಮಾರ್ಷಲ್ ಆರ್ಟ್‌ನಲ್ಲಿ ಬ್ಲಾಕ್‌ಬೆಲ್ಟ್ ಪಡೆದ ಪ್ರತಿಭಾನ್ವಿತರಾಗಿದ್ದು ಯೋಗಾಚಾರ್ಯರಾಗಿ ಪ್ರಸಿದ್ದರಾಗಿದ್ದಾರೆ. ಕೆಮೆಸ್ಟ್ರಿಯಲ್ಲಿ ಎಂಎಸ್ಸಿ, ಫಿಲಾಸಫಿಯಲ್ಲಿ ಎಂ.ಎ, ಬಿ.ಎಸ್ಸಿ ಬಿ.ಎಡ್ ಪದವೀಧರರಾಗಿರುವ ಇವರು ಪ್ರಸ್ತುತ ಮಂಗಳೂರಿನ ಎನಪೋಯ ವಿದ್ಯಾಸಂಸ್ಥೆಯಲ್ಲಿ ಯೋಗ ತರಬೇತುದಾರರಾಗಿದ್ದಾರೆ, ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿಗಳಿಗೆ ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತಿದ್ದಾರೆ. ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ರಾಜೇಶ್ ಅವರ ಗರಡಿಯಲ್ಲಿ ಪಳಗಿದ್ದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿರುತ್ತಾರೆ. ಐಮಾ ರಾಷ್ಟ್ರೀಯ ಮಟ್ಟದ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದ ರಾಜೇಶ್ ಹಾಗೂ ವೆನಿಲ್ಲಾ ಮಣಿಕಂಠ ಅವರಿಬ್ಬರ ಪ್ರತ್ಯೇಕ ಫೈಟಿಂಗ್ ವಿಡಿಯೂ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.