ಲಾಕ್ ಡೌನ್ ಸಡಿಲವಾಗಿ ಚಟುವಟಿಕೆಗಳು ಆರಂಭಗೊಂಡಿದೆ ಎಂದರೆ ಕೊರೊನಾ ಓಡಿಹೋಗಿದೆ ಎಂದರ್ಥವಲ್ಲ. ಸಣ್ಣ ಹಾಲ್ ನಲ್ಲಿ ನಲ್ವತ್ತು-ಐವತ್ತು ಮಂದಿ ಕುಳಿತು ಸಭೆ ನಡೆಸುವುದು, ಬಸ್ ಗಳಲ್ಲಿ ನಿಂತುಕೊಂಡು ಹೋಗುವುದು, ಗುಂಪುಗುಂಪಾಗಿ ಸೇರುವುದು, ನಿರ್ಬಂಧ ಹೇರಿಕೆ ನಮಗಲ್ಲ ಎಂಬಂತೆ ವರ್ತಿಸುವುದು, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಬಂಟ್ವಾಳದಲ್ಲೂ ಉಂಟು, ಎಲ್ಲ ಕಡೆಯೂ ಉಂಟು. ಅಂಗಡಿಗಳ ಮುಂದೆ ಗುರುತು ಹಾಕಿರುವುದು ನಮಗಲ್ಲ ಎಂಬಂತೆ ಈಗ ವರ್ತಿಸಲಾಗುತ್ತಿದೆ. ಚಟುವಟಿಕೆಗಳು ಬದುಕಿನ ಅನಿವಾರ್ಯತೆಗೆ ನಡೆಯಬೇಕು. ವ್ಯವಹಾರ ನಡೆಯಲೂಬೇಕು. ಕೊರೊನಾದೊಂದಿಗೆ ನಾವು ಜೀವಿಸಲು ಕಲಿಯಬೇಕು ಎಂಬುದು ಹೌದು. ಆದರೆ ಡೆಂಘೆ, ಮಲೇರಿಯಾದಂತೆ ಕೊರೊನಾ ಅಲ್ಲ. ವಿದೇಶಗಳಲ್ಲಿ ಅಷ್ಟೊಂದು ಸಾವು ಸಂಭವಿಸಿದ ವರದಿಗಳು ನಮ್ಮ ಅಂಗೈನಲ್ಲಿರುವ ಮೊಬೈಲ್ ಒತ್ತಿದರೆ ದೊರಕುತ್ತದೆ. ಕೊರೊನಾಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ. ಹೀಗಾಗಿ ಸೋಂಕು ನಮ್ಮಿಂದ ಮಕ್ಕಳು, ಆದರೆ ವಯಸ್ಸಾದವರಿಗೆ ಬಂದರೆ ಆಪತ್ತು ಎಂಬುದನ್ನು ಇನ್ನೂ ತಳ್ಳಿಹಾಕುವಂತಿಲ್ಲ. ಸಣ್ಣ ಕೊಠಡಿಗಳಲ್ಲಿ ಏಳೆಂಟು ಮಂದಿ ಗುಂಪಾಗಿ ಸೇರುವುದೂ ಈ ಹೊತ್ತಿನಲ್ಲೂ ಅಪಾಯಕಾರಿಯೇ. ಈ ಮಧ್ಯೆ ಹೊರರಾಜ್ಯಗಳಿಂದ ಬಂದವರಷ್ಟೇ ಅಲ್ಲ, ಕ್ವಾರಂಟೈನ್ ಮುಗಿಸಿ ಮನೆಗೆ ಬಂದವರಿಗೂ ಪಾಸಿಟಿವ್ ಬರುತ್ತಿರುವುದು, ಒಮ್ಮೆ ಪರೀಕ್ಷೆ ಮಾಡಿಸಿದರೂ ಸೇಫ್ ಅಲ್ಲ ಎಂಬುದನ್ನು ಸಾಬೀತುಪಡಿಸಿದಂತಾಗಿದೆ. ಇಷ್ಟೆಲ್ಲ ಬರೆಯಲು ಕಾರಣ ಇಂದಿನ ಕೋವಿಡ್ ವರದಿ. ಅದು ಇಲ್ಲಿದೆ ನೋಡಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೆಹಲಿಯಿಂದ ರೈಲಿನಲ್ಲಿ ಪ್ರಯಾಣಿಸಿದ್ದು ಮೇ 28ರಂದು ಕ್ವಾರಂಟೈನ್ ನಲ್ಲಿರಿಸಲಾಗಿದ್ದ 25ರ ಹರೆಯದ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಗೆ ದಾಖಲಿಸಲಾಗಿದೆ. ಮತ್ತೊಬ್ಬರು ಪುಣೆಯಿಂದ ಆಗಮಿಸಿ ಕಾರ್ಕಳದಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಕಟೀಲು ಗ್ರಾಮದ ಪಟ್ಟೆಜಾಲು ಎಂಬಲ್ಲಿರುವ ತಮ್ಮ ಮನೆಯಲ್ಲಿ ವಾಸವಿದ್ದು, ಜ್ವರದ ಲಕ್ಷಣಗಳು ಕಂಡುಬಂದ ಕಾರಣ, ಮೂಲ್ಕಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಿವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು 36 ವರ್ಷದ ವ್ಯಕ್ತಿ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಮಂದಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದವರು ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು 73 ಮಂದಿ ಡಿಸ್ಚಾರ್ಜ್ ಆದಂತಾಗಿದೆ. ಅಂತೆಯೇ ಇಂದು 75 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಇವತ್ತು ದೊರಕಿದ ಸ್ಯಾಂಪಲ್ ಗಳು 34. ಇನ್ನು 46 ಮಂದಿಯ ಸ್ಯಾಂಪಲ್ ಗಳ ಪರೀಕ್ಷಾ ವರದಿ ಬರಲು ಬಾಕಿ ಇವೆ. ದ.ಕ. ಜಿಲ್ಲೆಯ ಸ್ಥಿತಿ ಹೀಗಿದೆ. ಒಟ್ಟು 139 (10 ಅನ್ಯಜಿಲ್ಲೆ, ರಾಜ್ಯದ್ದು) ಪಾಸಿಟಿವ್. 7 ಸಾವು. 73 ಬಿಡುಗಡೆ. 59 ಮಂದಿಗೆ ಚಿಕಿತ್ಸೆ.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ವ್ಯಕ್ತಿಯೊಬ್ಬರನ್ನು ಜೂ. 3ರಂದು ಆರೋಗ್ಯ ಇಲಾಖೆಯ ತಂಡ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಿದೆ. ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬಳಿಯಿಂದ ಮತ್ತೊಬ್ಬ ವ್ಯಕ್ತಿಯೊಬ್ಬರನ್ನು ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಲಾಗಿದ್ದು, ಆ ವ್ಯಕ್ತಿಯು ತರಕಾರಿ ವಾಹನದ ಮೂಲಕ ಮಹಾರಾಷ್ಟದಿಂದ ಆಗಮಿಸಿದ್ದರು ಎನ್ನಲಾಗಿದೆ.
ರಾಜ್ಯದ ಸ್ಥಿತಿ ಹೀಗಿದೆ: ಕರ್ನಾಟಕದಲ್ಲಿ ಒಟ್ಟು 267 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ 4062 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಇವರಲ್ಲಿ 1514 ಮಂದಿ ಗುಣವಾಗಿ ಮನೆಗೆ ಮರಳಿದ್ದು, 2494 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1 ಸಾವು ಪ್ರಕರಣವಾಗಿದ್ದು, ಒಟ್ಟು 53 ಮಂದಿ ಸಾವನ್ನಪ್ಪಿದ್ದಾರೆ.
ಇವತ್ತು ದೃಢಪಟ್ಟ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಬಹುಪಾಲು (250 ಮಂದಿ) ಹೊರರಾಜ್ಯಗಳಿಂದ ಬಂದವರು. ಉಡುಪಿ ಜಿಲ್ಲೆಯಲ್ಲಿ 62 ಮಂದಿಗೆ ಇಂದು ಕೊರೊನಾ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 472 ಆಗಿದ್ದರೆ, ಕಲಬುರ್ಗಿಯಲ್ಲಿ 105 ಮಂದಿ ಗೆ ಇಂದು ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ 2 ಮಂದಿಗೆ ಸೋಂಕು ದೃಢಪಟ್ಟಿದೆ.