ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 69 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಂಗಳವಾರ ಗರ್ಭಿಣಿ ಸೇರಿದಂತೆ ಒಟ್ಟು 13 ಮಂದಿ ಡಿಸ್ಚಾರ್ಜ್ ಆದರು. ಇನ್ನೊಂದು ಗುಡ್ ನ್ಯೂಸ್ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಯಾವುದೇ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿಲ್ಲ. ಇಂದು 113 ಮಂದಿಯ ಗಂಟಲು ದ್ರವ ಮಾದರಿಯ ಫಲಿತಾಂಶ ಗೊತ್ತಾಗಿದ್ದು, ಎಲ್ಲವೂ ನೆಗೆಟಿವ್. ಆಗಿದೆ. ಇನ್ನು 80 ಮಂದಿಯ ಫಲಿತಾಂಶ ಬರಲು ಬಾಕಿ ಇದೆ. 50 ಮಂದಿಯ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಲಾಗಿದೆ.
ಇದುವರೆಗೆ 137 ಪಾಸಿಟಿವ್ ಕೇಸ್ ಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿವೆ. ಇವುಗಳ ಪೈಕಿ 10 ಕೇಸ್ ಗಳು ಹೊರಜಿಲ್ಲೆ, ರಾಜ್ಯದವು. ಅಂದರೆ 127 ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಿಗೇ ಪಾಸಿಟಿವ್ ಬಂದಿದೆ. ಅವರ ಪೈಕಿ ಚಿಕಿತ್ಸೆ ಪಡೆಯುತ್ತಿರುವವರು 61. ಮೃತಪಟ್ಟವರು 7. ಗುಣಮುಖರಾಗಿ ಮನೆಗೆ ತೆರಳಿದವರು 69 ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಂಗಳವಾರ ಸಂಜೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವಿಷ್ಟು ಜಿಲ್ಲೆಯ ಮಾಹಿತಿಯಾದರೆ, ರಾಜ್ಯದ ಸ್ಥಿತಿ ಹೀಗಿದೆ.
ಕರ್ನಾಟಕದಲ್ಲಿ ಇಂದು 388 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3796ಕ್ಕೆ ಏರಿಕೆಯಾಗಿದೆ. ಇಂದು ಉಡುಪಿಯಲ್ಲಿ 150, ಕಲಬುರ್ಗಿ 100, ಬೆಳಗಾವಿ 51 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಂದು 75 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 1403 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೆ, 388 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು 2339. ಮೃತಪಟ್ಟವರು 52. ಖಚಿತ ಪ್ರಕರಣಗಳ ಸಂಖ್ಯೆ 3796 ಆಗಿದೆ. ಇಂದು ಕೂಡ ಗೊತ್ತಾದ 388 ಪ್ರಕರಣಗಳಲ್ಲಿ 367 ಅಂತಾರಾಜ್ಯ ಪ್ರಯಾಣಿಕರಿಗೆ ಬಂದಿದೆ.
ಉಡುಪಿಗೆ ಅಗ್ರಸ್ಥಾನ:
ಇಡೀ ರಾಜ್ಯದಲ್ಲೀಗ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚು. ಒಟ್ಟು 410 ಪ್ರಕರಣಗಳು ಉಡುಪಿಯಲ್ಲಿದ್ದು, ಅವರ ಪೈಕಿ 346 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿಯೂ ಉಡುಪಿ ಅಗ್ರಪಟ್ಟದಲ್ಲಿರುವುದು ಆತಂಕಕಾರಿ. ದಕ್ಷಿಣ ಕನ್ನಡ ಜಿಲ್ಲೆ 12ನೇ ಸ್ಥಾನದಲ್ಲಿದೆ.