ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಇನ್ನೂ ಆಗಿಲ್ಲ. ಅದು ಶಿಕ್ಷಣ ಇಲಾಖೆ ಜವಾಬ್ದಾರಿ ನಮ್ಮದಲ್ಲ ಎನ್ನುವ ಹಾಗಿಲ್ಲ. ಗಡಿನಾಡ ಮಕ್ಕಳ ಸಹಿತ ತಾಲೂಕಿನ ಮಕ್ಕಳು ಮಳೆಗಾಲದಲ್ಲಿ ಪರೀಕ್ಷೆ ಬರೆಯುವ ಸನ್ನಿವೇಶವಿದು. ಇದೇ ರೀತಿ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಮಳೆಗಾಲದಲ್ಲಿ ಬರುವ ಸನ್ನಿವೇಶಗಳನ್ನು ಎದುರಿಸಬೇಕು. ಈಗಾಗಲೇ ಟಾಸ್ಕ್ ಪೋರ್ಸ್ ರಚನೆಯಾಗಿದೆ. ಇದು ಕೋವಿಡ್ ಹಿನ್ನೆಲೆಯಲ್ಲಿ ರಚನೆಗೊಂಡಿದ್ದು, ಇನ್ನಷ್ಟು ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ತಂಡವಾಗಿಸಿಕೊಳ್ಳಿ. ಒಮ್ಮತದಿಂದ ಕೆಲಸ ಮಾಡಿ. ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಕೂರಬೇಡಿ.
ಹೀಗೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೋಮವಾರ ಗ್ರಾಪಂ ಪಿಡಿಒಗಳಿಗೆ ಸಲಹೆ ನೀಡಿದರು.
ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಸೋಮವಾರ ಮಳೆಗಾಲದ ಮುಂಜಾಗ್ರತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಚುರುಕಾಗಿ ವ್ಯವಹರಿಸಬೇಕಿದ್ದು, ಮುಂಗಾರು ಎದುರಿಸಲು ಸನ್ನದ್ಧರಾಗಬೇಕಿದೆ ಎಂದು ಈ ಸಂದರ್ಭ ಅವರು ತಿಳಿಸಿದರು.
ಈ ಸಂದರ್ಭ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್, ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಮುನ್ನಚ್ಚರಿಕೆಯಾಗಿ ಎರಡು ಬೋಟ್ ಗಳನ್ನು ಕಾದಿರಿಸಲಾಗಿದೆ. ಇನ್ನು ಹೆಚ್ಚುವರಿ 4 ಬೋಟ್‌ಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಶಾಸಕರ ಗಮನಕ್ಕೆ ತಂದರು.
ಬಂಟ್ವಾಳ ಕ್ಷೇತ್ರದಲ್ಲಿ 25 ಎಕರೆ ಜಾಗವಿದ್ದರೆ ಸರಕಾರದಿಂದ ವಸತಿ ಶಾಲೆ ಮಂಜೂರಾಗಲಿದ್ದು, ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜತೆಗೆ ಜಾಗ ಗುರುತಿಸಿದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮಾರುಕಟ್ಟೆ, ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಕೂಡ ಮಂಜೂರಾಗಲಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.