ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಮಡಿಮುಗೇರಿನಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ಎಎಂಆರ್ ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ನೀರು ಶೇಖರಿಸಲು ಮೇ 31ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಬಳಿಕ ನದಿ ನೀರಿನ ಮಟ್ಟ ಏರುವುದರಿಂದ ನದೀ ತೀರದ ಆಸುಪಾಸಿನ ಜನರು ಮುಂಜಾಗರೂಕತೆ ವಹಿಸಬೇಕು ಎಂದು ಹೇಳಿದ್ದು, ಇದರಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆಡಳಿತದಿಂದ ನದೀ ತೀರವಾಸಿಗಳಿಗೆ ಧ್ವನಿವರ್ಧಕ ಮೂಲಕ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ.
ಎಎಂಆರ್ ಅಣೆಕಟ್ಟಿನಲ್ಲಿ ಶೇಖರಿಸಿದ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸಿ, ಅದೇ ನೀರನ್ನು ವಾಪಸ್ ನದಿಯ ಕೆಳಭಾಗದಲ್ಲಿ ಜೂನ್ 1ರಿಂದ ಅಥವಾ ನಂತರದ ದಿನಗಳಲ್ಲಿ ಬಿಡಲಾಗುವುದು. ಮಳೆಗಾಲ ಆರಂಭವಾದ ನಂತರ ನೀರಿನ ಒಳಹರಿವಿನ ಪ್ರಮಾಣವನ್ನು ಹೊಂದಿಕೊಂಡು, ಅಣೆಕಟ್ಟಿಗೆ ಅಳವಡಿಸಿದ ಗೇಟುಗಳನ್ನು ತೆರೆದು, ನೀರನ್ನು ಕೆಳಭಾಗಕ್ಕೆ ಬಿಡಬೇಕಾಗುತ್ತದೆ. ಆದ್ದರಿಂದ ಮೇ 31ರಿಂದ ನದಿಯ ಅಣೆಕಟ್ಟಿನ ಕೆಳಭಾಗದ ಹಾಗೂ ಮೇಲ್ಭಾಗದ ಇಕ್ಕೆಲಗಳಲ್ಲಿ ನೀರಿನ ಮಟ್ಟ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಳಿತವಾಗುವುದರಿಂದ ನದಿಯ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕುಪ್ರಾಣಿಗಳ ಸಂರಕ್ಷಣೆಯ ವಿಷಯವಾಗಿ ಜನರಿಗೆ ಮುಂಜಾಗರೂಕತೆ ವಹಿಸಲು ನಿರ್ದೇಶನ ನೀಡಲು ಬಂಟ್ವಾಳ ತಹಸೀಲ್ದಾರ್ ಸಹಿತ ದ.ಕ. ಜಿಲ್ಲಾಧಿಕಾರಿಗೆ ಎಎಂಆರ್ ವಿನಂತಿಸಿದೆ. ಇದಲ್ಲದೆ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರು, ಎಂಸಿಸಿ ಆಯುಕ್ತರು, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಅಣೆಕಟ್ಟು ವ್ಯಾಪ್ತಿಗೆ ಒಳಪಡುವ ಭಾಗದ ಕಂದಾಯ ನಿರೀಕ್ಷಕರು, ಗ್ರಾಮಗಳಾದ ನರಿಕೊಂಬು, ತುಂಬೆ, ಕಡೇಶಿವಾಲಯ, ಬಾಳ್ತಿಲ, ಸಜಿಪಮೂಡ, ನಾವೂರು, ಸರಪಾಡಿ, ಬರಿಮಾರು, ಸಜಿಪಮುನ್ನೂರು ಗ್ರಾಮಗಳ ಪಿಡಿಒಗಳಿಗೂ ಎಎಂಆರ್ ಪತ್ರಮುಖೇನ ಮಾಹಿತಿ ನೀಡಿದ್ದಾಗಿ ಎಎಂಆರ್ ಪ್ರಕಟಣೆ ತಿಳಿಸಿದೆ.