ಕಳೆದ ಸಾಲಿನ ತಾಲೂಕು ಪಂಚಾಯಿತಿಯ ಸುಮಾರು 90 ಲಕ್ಷ ರೂಗಳಷ್ಟು ಹಣ ಮಂಜೂರಾಗದೆ, ಲ್ಯಾಪ್ಸ್ ಆಗಿದ್ದು, ಇದರಿಂದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಪಾವತಿಗೆ ತೊಂದರೆಯಾಗಿದೆ. ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ತಯಾರಿ ಕುರಿತು ಬುಧವಾರ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವೇದಿಕೆಯಲ್ಲಿದ್ದರು. ಸದಸ್ಯರಾದ ಉಸ್ಮಾನ್ ಕರೋಪಾಡಿ, ಹೈದರ್ ಕೈರಂಗಳ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಸಂಜೀವ ಪೂಜಾರಿ, ನಸೀಮಾ ಬೇಗಂ, ಆದಂ ಕುಂಞ, ಯಶವಂತ ಪೊಳಲಿ ಸಹಿತ ಹಲವರು ವಿವಿಧ ವಿಚಾರಗಳನ್ನು ಮಂಡಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿ. ಮಹೇಶ್, ಪಂ.ರಾ.ಇಂ ಉಪ ವಿಭಾಗ ಎಇಇ ಬಂಟ್ವಾಳ ತಾರಾನಾಥ ಸಾಲ್ಯಾನ್ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯ ವಿವರಗಳು ಹೀಗಿವೆ: ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ವಿಷಯ ಪ್ರಸ್ತಾಪಿಸಿ, ಸುಮಾರು 90 ಲಕ್ಷ ರೂಗಳಷ್ಟು ಹಣ ಲ್ಯಾಪ್ಸ್ ಆಗಿದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಸಂಜೀವ ಪೂಜಾರಿ, ಹೈದರ್ ಕೈರಂಗಳ ದನಿಗೂಡಿಸಿದರು. ಉತ್ತರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಖಜಾನೆಯಲ್ಲಿ ನಿರ್ದಿಷ್ಟ ದಿನದೊಳಗೆ ಬಂದ ಹಣ ವಾಪಸ್ ಹೋಗಿದೆ. ಎಂದರು. ಈ ವೇಳೆ ಖಜಾನೆ ಸಿಬ್ಬಂದಿ ಮೇಲೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಮಾತ್ರ ಈ ರೀತಿ ಯಾಕೆ ಸಮಸ್ಯೆಯಾಗುತ್ತದೆ ಪುತ್ತೂರು ತಾ.ಪಂ.ನಲ್ಲಿ ಪೂರ್ಣ ಅನುದಾನ ವ್ಯಯವಾಗಿದೆ. ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಬಳಿಕ ಖಜಾನಾಧಿಕಾರಿಯವರನ್ನು ಸಭೆಗೆ ಕರೆಸಲಾಯಿತು. ತಾನು ಸರಕಾರದ ಆದೇಶದ ಪ್ರಕಾರವೇ ಕರ್ತವ್ಯ ನಿರ್ವಹಿಸಿದ್ದೇನೆ. ಮಾ. 18ರ ವರೆಗೆ ಕೊನೆಯ ದಿನಾಂಕವಿದ್ದರೂ, ಮಾ.21ರ ವರೆಗೂ ಬಿಲ್ ಪಾಸ್ ಮಾಡಿದ್ದೇನೆ. ಆದರೆ ಮಾ. 23ಕ್ಕೆ ಕಮೀಷನರ್ ಅವರಿಂದ ಸೂಚನೆ ಬಂದ ಬಳಿಕ ನಿಲ್ಲಿಸಿದ್ದೇವೆ ಎಂದರು.
ಪ್ರತಿ ಸದಸ್ಯರಿಗೆ 5.9 ಲಕ್ಷ ರೂ ಅನುದಾನ: ಬಂಟ್ವಾಳ ತಾ.ಪಂ.ನ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ ೫.೯೦ ಲಕ್ಷ ರೂ. ಅನುದಾನ ಮೀಸಲಿಡಲಾಗುತ್ತಿದ್ದು, ಮೇ 28ರ ಸಂಜೆಯೊಳಗೆ ತಮ್ಮ ಕ್ಷೇತ್ರದ ಕಾಮಗಾರಿಗಳ ಪಟ್ಟಿ ನೀಡುವಂತೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸದಸ್ಯರಿಗೆ ಸೂಚಿಸಿದರು. ಗ್ರಾ.ಪಂ.ನ 14ನೇ ಹಣಕಾಸಿನ ಅನುದಾನದಲ್ಲಿ ಲಾಕ್‌ನ್‌ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ನೆರವು ನೀಡಲು ಕ್ರಮಕೈಗೊಳ್ಳುವಂತೆ ಸದಸ್ಯ ಆದಂ ಕುಂಞಿ ಅವರು ಸಲಹೆ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ಯುವಕನ ರಕ್ಷಣೆಗೆ ಮುಂದಾದ ಗೂಡಿನಬಳಿಯ ಯುವಕರಿಗೆ ತಾ.ಪಂ.ನಿಂದ ಸನ್ಮಾನಿಸಬೇಕು ಎಂದು ಸದಸ್ಯೆ ನಸೀಮಾ ಬೇಗಂ ಸಲಹೆ ನೀಡಿದರು.