ಕೊರೊನಾ ವೈರಾಣುವಿನಿಂದ ಬಾಧಿತ ಐವರು ನಮ್ಮ ನಿಮ್ಮದೇ ಊರಿನವರು ಇಂದು ಗುಣಮುಖರಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಗುಣಮುಖರಾಗಿ ಮನೆಗೆ ತೆರಳಿದರು. ಅವರನ್ನು ಚಪ್ಪಾಳೆ ತಟ್ಟಿ ಬೀಳ್ಕೊಡಲಾಯಿತು. ಅದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ಪ್ರಕರಣಗಳು ಇವೆ ಎಂಬ ವರದಿಗಳು ಬಂದವು. ಐವರು ಡಿಸ್ಚಾರ್ಜ್ ಆದಾಗ ಮತ್ತೆರಡು ಕೇಸ್. ಅವರಲ್ಲಿ ಒಬ್ಬರು 41 ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದು ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾದರೆ, ಮತ್ತೊಂದು ಪ್ರಕರಣದಲ್ಲಿ 30 ವರ್ಷದ ವ್ಯಕ್ತಿ ಮಹಾರಾಷ್ಟ್ರದಿಂದ ಬಂದಿದ್ದು, ಅವರಲ್ಲಿ ಸೋಂಕು ದೃಢಪಟ್ಟಿರುವುದಾಗಿ ಪ್ರಕಟಣೆ ಹೊರಡಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಲೆಕ್ಕವನ್ನೇ ತೆಗೆದುಕೊಳ್ಳಿ. ಇದುವರೆಗೆ 65 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇವುಗಳ ಪೈಕಿ 8 ಕೇಸ್ ಗಳು ಅನ್ಯರಾಜ್ಯ, ಜಿಲ್ಲೆಯವು ಎಂದು ಪರಿಗಣಿಸಿದರೆ, 59 ರೋಗಿಗಳು ಜಿಲ್ಲೆಯವರೇ ಆಗಿದ್ದಾರೆ. ಅವರ ಪೈಕಿ 6 ಸಾವು ಸಂಭವಿಸಿದರೆ, 26 ಮಂದಿ ಗುಣಮುಖರಾಗಿದ್ದಾರೆ. ಇನ್ನು 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈಗಿರುವ ಕೊರೊನಾ ಬಾಧಿತರ ಸಂಖ್ಯೆ 33.
ಕರ್ನಾಟಕದಲ್ಲಿ ಇಂದು ಒಂದೇ ದಿನ 216 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಬಂಟ್ವಾಳದ ಸ್ಥಿತಿಯನ್ನು ನೋಡಿರಿ.ಸುಮಾರು ಒಂದು ತಿಂಗಳಿಗೂ ಜಾಸ್ತಿ ದಿನಗಳು (ಏ.19ರಿಂದ ಮೇ 23) ಅಂದರೆ ಒಟ್ಟು 34 ದಿನಗಳ ಕಾಲ ಆವರಿಸಿದ್ದ ಕೊರೊನಾ ಸೋಂಕು ಪ್ರಕರಣಗಳು ಇಂದು ಬಂಟ್ವಾಳ ಪೇಟೆಯ ಜನರಲ್ಲಿಲ್ಲ. ಇಷ್ಟು ದಿನ ಒಟ್ಟು 9 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದರು. ಉಳಿದವರು ಒಬ್ಬೊಬ್ಬರಾಗಿ ಗುಣಮುಖರಾಗಿದ್ದು, ಇಂದು ಅವರ ಪೈಕಿ ಮೂವರನ್ನು ಮಂಗಳೂರಿನಲ್ಲಿ ಬೀಳ್ಕೊಡಲಾಯಿತು. ಒಂದು ಮನೆಯ 4, ಮತ್ತೊಂದು ಮನೆಯ 2, ಇನ್ನೊಂದು ಮನೆಯ 3 ಮಂದಿಗೆ ಕೊರೊನಾ ಪಾಸಿಟಿವ್ ಬಂದದ್ದು ಬಂಟ್ವಾಳದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದು ಜಿಲ್ಲೆಯ ಗಮನವನ್ನೂ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಪೇಟೆ ವಾಸಿಗಳು ಮುಂಜಾಗರೂಕತಾ ಕ್ರಮವಾಗಿ ಸುದೀರ್ಘ ಕಾಲ ದಿಗ್ಬಂಧನವನ್ನು ಅನುಭವಿಸಬೇಕಾಯಿತು.
ಇದೀಗ ಬಂಟ್ವಾಳ ಪೇಟೆಯಲ್ಲಿ ಕೊರೊನಾ ಬಾಧಿತ ಮನೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳೂ ಸೀಲ್ ಡೌನ್ ನಿಂದ ಮುಕ್ತಗೊಂಡಿದೆ. ಇಷ್ಟರವರೆಗೆ ಇದ್ದ ನಿರ್ಬಂಧಗಳನ್ನು ತೆಗೆಯಲಾಗಿದೆ. ಬೈಪಾಸ್ ಕಾಮಗಾರಿ ಕಾರಣ ಬಂಟ್ವಾಳ ಪೇಟೆಯೊಳಗೆ ಬರುತ್ತಿದ್ದ ವಾಹನಗಳು ಮತ್ತೆ ಬೈಪಾಸ್ ನಿಂದ ಬರುತ್ತಿದ್ದವು. ಇದೀಗ ಬಂಟ್ವಾಳ ಪೇಟೆಯಲ್ಲಿ ವಾಹನ ಸಂಚಾರ ಸಾಧ್ಯವಾದ ಕಾರಣ ಮತ್ತೆ ಎಂದಿನಂತೆಯೇ ಸಂಚಾರ ಆರಂಭಗೊಳ್ಳುತ್ತಿದೆ.
ಕೋವಿಡ್ ಪ್ರಕರಣಗಳನ್ನು ಯಾರೂ ಆಹ್ವಾನಿಸುವುದಿಲ್ಲ. ಕೊರೊನಾ ವೈರಾಣು ಯಾರನ್ನೂ ಕೇಳಿ ಬರುವುದಿಲ್ಲ. ಅದಕ್ಕೆ ಯಾವ ಅಡೆ ತಡೆಯೂ ಇರುವುದಿಲ್ಲ. ಬಂಟ್ವಾಳ ಪೇಟೆಯಲ್ಲೀಗ ಕೊರೊನಾ ಬಾಧಿತರು ಇಲ್ಲದಿದ್ದರೂ ರಾಜ್ಯ, ದೇಶದಲ್ಲಿ ಕೊರೊನಾ ಬಾಧಿತರ ಸಂಖ್ಯೆ ಏರುತ್ತಲೇ ಇದೆ. ಕೊರೊನಾಕ್ಕೆ ಶ್ರೀಮಂತ, ಬಡವ, ಜಾತಿ, ಅಂತಸ್ತು, ಧರ್ಮ ಇಲ್ಲದ ಕಾರಣ ನಾವು ಸ್ವಲ್ಪ ಎಡವಿದರೂ ನಮ್ಮನ್ನು ಆವರಿಸಬಹುದು. ಯಾವುದೇ ಪ್ರದೇಶವಿರಲಿ, ನಮ್ಮದು ರೋಗಮುಕ್ತ ಎಂದು ದಿಢೀರ್ ಹೇಳುವ ಪರಿಸ್ಥಿತಿ ಈಗಿಲ್ಲ. ರೋಗಾಣು ನಮ್ಮಲ್ಲಿ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಿಯಮಗಳನ್ನು ಎಲ್ಲರೂ ಪಾಲಿಸಿದರಷ್ಟೇ ಸಂಕಟ ದೂರವಾದೀತು.