ತಾಲೂಕಿನ ಸಾಲೆತ್ತೂರು ಕೊಳ್ನಾಡು ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆ ಇರುವುದನ್ನು ಪತ್ತೆಹಚ್ಚಿರುವ ವಿಟ್ಲ ಪೊಲೀಸರು, ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ವಿಟ್ಲ ಸಾಲೆತ್ತೂರು ಎಂಬಲ್ಲಿ ಧಾಳಿ ನಡೆಸಿದ ಪೊಲೀಸರು ಹ್ಯಾರಿಸ್ ಎಂಬಾತನನ್ನು ವಶಕ್ಕೆ ಪಡೆದು ಕಳವುಗೈದ ಹಸು, ಒಂದು ಪಿಕ್ಅಪ್ ವಾಹನ, ಚಾಕು, ಹಗ್ಗ ಗಳನ್ನು ಸ್ವಾಧೀನಪಡಿಸಿ ಆತನನ್ನು ವಿಚಾರಣೆ ನಡೆಸಲಾಗಿ ಆರೋಪಿ ನೀಡಿದ ಮಾಹಿತಿಯಂತೆ ಸಾಲೆತ್ತೂರು ಗ್ರಾಮದ ಐತಕುಮೇರ್ ನ ತೋಟದ ಶೆಡ್ ಗೆ ಧಾಳಿ ನಡೆಸಿ ಸದರಿ ಸ್ಥಳದಿಂದ ಕಡಿಯಲಾಗಿದ್ದ ದನ, ಸುಮಾರು 200 ರಷ್ಟು ದನದ ಚರ್ಮಗಳನ್ನು ಮತ್ತು ದನ ಕಡಿಯಲು ಬಳಸಿದ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಗೊಳಿಸಿರುತ್ತಾರೆ. ಅಲ್ಲದೇ ಕಡಿಯಲು ಕಟ್ಟಿ ಹಾಕಿದ್ದ 7 ಹಸುಗಳನ್ನು ರಕ್ಷಿಸಿ ಸ್ವಾಧೀನ ಪಡಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ದನ ಕಳ್ಳತನದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‌ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ವಿಟ್ಲ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿಗಳಾದ ಜಯರಾಮ ಕೆ. ಟಿ., ಪ್ರತಾಪ ರೆಡ್ಡಿ, ವಿಶ್ವನಾಥ, ಶಂಕರ್, ಅಶೋಕ, ಹೇಮರಾಜ, ಡ್ಯಾನಿ ತ್ರಾವೋ, ವಿನೋದ್, ವಿಠಲ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿತು. ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಕಸಾಯಿಖಾನೆ ಅಕ್ರಮ ಪ್ರಕರಣವೊಂದರ ಆರೋಪದಲ್ಲಿ ದಾಳಿ ನಡೆಸಲಾಗಿತ್ತು.