21 ದಿನಗಳಲ್ಲಿ 40 ಅಡಿ ಆಳದ ಬಾವಿಯನ್ನು ಒಬ್ಬನೇ ಕೊರೆದು ಯಶಸ್ವಿಯಾಗಿ ಗಿಡಗಳಿಗೆ ನೀರುಣಿಸಲು ತಯಾರಾದವರು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪೊರ್ಸಪಾಲು ನಿವಾಸಿ ನೋಣಯ್ಯ ಪೂಜಾರಿ.
ಈ ಸಾಧನೆಯನ್ನು ಅವರು ನಡೆಸಿದ್ದು ಲಾಕ್ಡೌನ್ ಅವಧಿಯಲ್ಲಿ. ಕೃಷಿ ಮಾಡಲೆಂದು ಅಡಕೆ ಗಿಡಗಳು ನೆಟ್ಟರೆ, ಉಣಿಸಲು ನೀರಿಲ್ಲ. ಕಳೆದ ಬೇಸಗೆಯಲ್ಲಿ ಸಂಕಷ್ಟ. ಈ ಬೇಸಗೆಯಲ್ಲಿ ಹಾಗಾಗಬಾರದು ಎಂದು ಯೋಚಿಸಿ ಬಾವಿ ನಿರ್ಮಿಸಲು ಹೊರಟರು. ಕೃಷಿ ಕಾರ್ಯಗಳನ್ನು ಮಾಡುವುದು, ಬೀಡಿ ಕಟ್ಟುವುದು, ಪೂಜೆ ಕೆಲಸಗಳಿಗೆ ಸಹಾಯಕರಾಗಿ ಹೋಗುವ ನೋಣಯ್ಯ ಪೂಜಾರಿ ಮನೆಯಲ್ಲಿ ಮಡದಿ, ಮೂರು ಮಕ್ಕಳೊಂದಿಗೆ ತಮ್ಮ ಜಮೀನಿಗೆ ಸಂಬಂಧಪಟ್ಟ ಗುಡ್ಡ ಪ್ರದೇಶದಲ್ಲಿ ಪತ್ನಿ ಹಾಗು ಮೂವರು ಮಕ್ಕಳ ಸಹಾಯದೊಂದಿಗೆ ಬಾವಿ ನಿರ್ಮಿಸಲು ಹೊರಟರು.
ಏಪ್ರಿಲ್ 25ರಂದು ಬಾವಿ ತೋಡಲು ಹೊರಟ ಅವರು ಮೇ.16ಕ್ಕೆ 40 ಅಡಿ ಆಳ ಕೊರೆದಾಗ 10 ಬಕೆಟ್ ನೀರು ಸಿಕ್ಕಿದೆ ಎನ್ನುತ್ತಾರೆ ಅವರು. ಮೊದಲ ಏಳು ದಿನ ಅರ್ಧ ದಿನ ಕೆಲಸ ಮಾಡಿದರೆ, ಸಂಕ್ರಾಂತಿ ಸಹಿತ ಮೂರು ದಿನ ಹೊರತುಪಡಿಸಿದರೆ, ಪ್ರತಿದಿನ ಬೆಳಗ್ಗೆ 9 ಗಂಟೆಗೆ ಹೊರಟರೆ, ಸಂಜೆ 5 ಗಂಟೆವರೆಗೆ ಬಾವಿ ತೋಡುತ್ತಿದ್ದೆ. ನನ್ನ 14 ವರ್ಷದ ಮಗ ಸಹಾಯಕನಾಗಿ ಬಂದರೆ, ಉಳಿದ ವೇಳೆ ಪತ್ನಿ, ದೊಡ್ಡ ಮಗಳು ಸಹಾಯ ಮಾಡುತ್ತಿದ್ದರು. ನಾನು, ಪತ್ನಿ, ನನ್ನ ಮಗ, ಇಬ್ಬರು ಪುತ್ರಿಯರು ಸೇರಿ ಬಾವಿ ತೋಡುವ ಕಾರ್ಯವನ್ನು ನಿಷ್ಠೆಯಿಂದ ಮಾಡಿದೆವು. ಶನಿವಾರ 10 ಬಕೆಟ್ ನೀರು ಸಿಕ್ಕಿದೆ. ಇದು ನಾವು ನಂಬಿದ ದೈವದೇವರು ನೀಡಿದ ವರಪ್ರಸಾದ ಎಂದೇ ನಂಬಿದ್ದೇನೆ ಎನ್ನುತ್ತಾರೆ ಅವರು.