ಅದು 2016 ನೇ ಇಸವಿ. ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದಿನ ಘಟನೆ. ಬಿ.ಸಿ.ರೋಡಿನಲ್ಲಿ ನೋಡನೋಡುತ್ತಿದ್ದಂತೆ ಭಾರಿ ಬಿರುಗಾಳಿ, ಮಳೆ. ಸಂಜೆಯ ಹೊತ್ತಿಗೆ ಇಡೀ ಬಿ.ಸಿ.ರೋಡ್ ಅನ್ನೇ ಗುಡಿಸಿಕೊಂಡು ಹೋಗುವಂತೆ ಬಂದ ಬಿರುಗಾಳಿ. ಹಲವು ಮರಗಳು, ವಿದ್ಯುತ್ ಕಂಬಗಳು ಉರುಳಿ ವ್ಯಾಪಕ ಹಾನಿಯಾಗಿದ್ದ ಸಂದರ್ಭವದು.
ಈಗ 2020, ಮೇ ತಿಂಗಳ 18ನೇ ತಾರೀಕು. ನಾಲ್ಕು ವರ್ಷಗಳ ಹಿಂದಿನ ನೆನಪನ್ನು ಮರುಕಳಿಸುವಂತೆ ಗಾಳಿ, ಮಳೆ. ತಂಪಾದ ವಾತಾವರಣವಿದೆ. ಅಷ್ಟೊಂದು ಭೀಕರವಾದ ಗಾಳಿ ಬಾರದೇ ಇದ್ದರೂ ತಾಲೂಕಿನ ಕೆಲವೆಡೆ ಅಡಕೆ ಮರಗಳನ್ನು ಉರುಳಿಸಲು ಶಕ್ತವಾಗಿವೆ. ಪುಣಚ ಸಹಿತ ಹಲವೆಡೆ ಅಡಕೆ ಮರಗಳು ಉರುಳಿವೆ. ದಿನವಿಡೀ ಮಳೆ ಸುರಿಯುವ ಲಕ್ಷಣ ಗೋಚರಿಸುತ್ತಿದೆ. ಚಂಡಮಾರುತದ ಪರಿಣಾಮ ಇದು.