ವಿಡಿಯೋ ಮತ್ತು ಸುದ್ದಿ ವಿವರಗಳಿಗೆ ಕ್ಲಿಕ್ ಮಾಡಿರಿ
ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬೆಂಗಳೂರಿನ ಮೂಲಕ ಜಾರ್ಖಂಡ್ ಗೆ ಮಂಗಳವಾರ ರಾತ್ರಿ ಹೊರಟ ಸುಮಾರು 1 ಸಾವಿರಕ್ಕೂ ಮಿಕ್ಕಿ ವಲಸೆ ಕಾರ್ಮಿಕರಿಗೆ ಬಂಟ್ವಾಳ ಬಂಟರ ಭವನದಲ್ಲಿ ಆಶ್ರಯ ನೀಡಲಾಗಿದ್ದು, ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಎರಡು ದಿನಗಳಲ್ಲಿ ಅವರನ್ನು ರೈಲಿನಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಲಾಕ್‍ಡೌನ್‍ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಾರ್ಖಂಡ್ ರಾಜ್ಯದ ಸುಮಾರು 1000ಕ್ಕೂ ಅಧಿಕ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟ್ಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಣವನ್ನು ಮುಂದುವರಿಸಿದ್ದರು.
ಮಂಗಳೂರು ನಗರದಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು. ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ತಮ್ಮ ಪ್ರಯಣವನ್ನು ಮುಂದುವರಿಸಿದರು.
ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್‍ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಅಧಿಕಾರಿಗಳು ಮಾಡಿದ ಮನವಿಗೆ ತಲೆಯಾಡಿಸಿದರು. ಸುದ್ದಿ ತಿಳಿದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸಂಪರ್ಕಿಸಿದ್ದು, ಬಳಿಕ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ಅವರ ಮೂಲಕ ಬಂಟ್ವಾಳ ಬಂಟರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಯಿತು.
ಸ್ಥಳಕ್ಕೆ ಮಧ್ಯರಾತ್ರಿ ವೇದವ್ಯಾಸ ಕಾಮತ್ ಅವರಿಂದ ಊಟದ ವ್ಯವಸ್ಥೆ ಕಲ್ಪಿಸಿದರೆ, ಬುಧವಾರದಿಂದ ಎಲ್ಲರಿಗೂ ಊಟ, ಉಪಾಹಾರದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ನೆಲೆಯಲ್ಲಿ ಒದಗಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲಂಟೈನ್ ಡಿಸೋಜ, ತಾಪಂ ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರೊಂದಿಗೆ ಮಾತುಕತೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಆಗಮಿಸಿದ ಅಷ್ಟೂ ಕಾರ್ಮಿಕರಿಗೆ ಅಭಯ ನೀಡಿ, ಅವರಿಗೆ ವೈದ್ಯಕೀಯ ತಪಾಸಣೆ, ದಾಖಲೆ ಪರಿಶೀಲಿಸಿ, ಪ್ರತ್ಯೇಕ ತಂಡಗಳನ್ನಾಗಿ ಬೇರ್ಪಡಿಸಿ, ರೈಲಿನಲ್ಲಿ ಕಳುಹಿಸುವ ವ್ಯವಸ್ಥೆ ಕೈಗೊಂಡರು.
ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಪ್ರಸನ್ನ ಕಾರ್ಮಿಕರಿಗೆ ಕಳುಹಿಸುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ತಾಪಂ ಸದಸ್ಯರಾದ ಗಣೇಶ್ ಸುವರ್ಣ ತುಂಬೆ, ಪ್ರಭಾಕರ ಪ್ರಭು, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ ಸಹಿತ ಕಂದಾಯ, ಆರೋಗ್ಯ, ಪೊಲೀಸ್ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಸೂಕ್ತ ವ್ಯವಸ್ಥೆಯನ್ನು ಕೈಗೊಂಡರು. ಬಂಟ್ವಾಳ ಶಾಸಕರ ಸಹಾಯವಾಣಿಯ ಸುಮಾರು 40ರಷ್ಟಿದ್ದ ತಂಡ ಸ್ವಯಂಸೇವಕರಾಗಿ ಊಟೋಪಚಾರ ವ್ಯವಸ್ಥೆಯನ್ನು ನಿರ್ವಹಿಸಿದರು. ಈ ವೇಳೆ ಕಾರ್ಮಿಕರೊಂದಿಗೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ನೀವು ನಮ್ಮ ಅತಿಥಿಗಳು ಇದ್ದ ಹಾಗೆ, ನೀವು ವಿನಾ ಕಾರಣ ಕಾಲ್ನಡಿಗೆಯಲ್ಲಿ ಹೋಗಬೇಡಿ, ಎಲ್ಲ ಬಂದೋಬಸ್ತ್ ಗಳನ್ನು ಕೈಗೊಂಡು ನಿಮ್ಮನ್ನು ಗೌರವಯುತವಾಗಿ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.