ಮಂಗಳೂರು: ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಕರ್ಕಿಕೋಡಿ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ (44) ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.
ಅವರು ಹಿರಿಯ ಸಾಹಿತಿ ವಿ.ಗ. ನಾಯಕ ಮತ್ತು ಶ್ಯಾಮಲಾ ಕರ್ಕಿಕೋಡಿ ಅವರ ಪುತ್ರಿ.
ಸೀತಾಲಕ್ಷ್ಮೀ ಅವರು ಅಡ್ಯನಡ್ಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
‘ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಎಚ್‌ಡಿ ಪದವಿ ಪ್ರದಾನಿಸಿ ಗೌರವಿಸಿದೆ. ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆ ನೀಡಿದ ಸೀತಾಲಕ್ಷ್ಮೀ ಅವರು ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ, ರಂಗಕರ್ಮಿ ಸದಾನಂದ ಸುವರ್ಣ ಸಂಪದ, ರಂಗಚೇತನ ಸದಾನಂದ ಸುವರ್ಣ, ಕಮಲಾದೇವಿ ಚಟ್ಟೋಪಾಧ್ಯಾಯ, ಮುಂತಾದ ಹತ್ತಾರು ಕೃತಿಗಳನ್ನು ರಚಿಸಿದ್ದು, ಅವರಿಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎ ಪ್ರಶಸ್ತಿ ಲಭಿಸಿದೆ.ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು.
ಸಂತಾಪ: ಮಂಗಳವಾರ ರಾತ್ರಿ ನಿಧನ ಹೊಂದಿದ ಹಿರಿಯ ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಂತಾಪ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ತಂದೆ, ತಾಯಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.