ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಸಂಪರ್ಕಿಸುವ ನೇತ್ರಾವತಿ ನದಿ ಕಿನಾರೆಯ ಕೂಟೇಲು ಎಂಬಲ್ಲಿ ಹತ್ಯೆಗೈದ ಗೋವಿನ ತ್ಯಾಜ್ಯವನ್ನು ಸೇತುವೆಯಿಂದ ನೀರಿಗೆ ಎಸೆದು ಪರಾರಿಯಾದ ಘಟನೆ ನಡೆದಿದೆ.
ಸೋಮವಾರ ಸಂಜೆ ಸೇತುವೆಯಿಂದ ಹಾದುಹೋಗುವ ಸಂದರ್ಭ ವಾಸನೆ ಬಡಿದು ಶೋಧಿಸಿದ ಸ್ಥಳೀಯರಿಗೆ ದನದ ಕಡಿದ ಕಾಲು ಮತ್ತು ತ್ಯಾಜ್ಯಗಳು ಇರುವುದು ಕಂಡುಬಂತು. ಕೂಡಲೇ ಬಜರಂಗದಳದ ಮಣಿನಾಲ್ಕೂರು ಜೈಹನುಮಾನ್ ಶಾಖೆ ಪ್ರಮುಖರು ಒಟ್ಟು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರನ್ನೂ ನೀಡಲಾಗಿದೆ. ಈ ಸಂದರ್ಭ ವಿಶ್ವ ಹಿಂದು ಪರಿಷತ್ ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ಉಭಯ ತಾಲೂಕಿನ ಗಡಿಪ್ರದೇಶವಾಗಿರುವ ಈ ಜಾಗ ಗೋಹಂತಕರಿಗೆ ಹೇಳಿ ಮಾಡಿಸಿದ ಹಾಗಿದ್ದು, ಈ ಸೇತುವೆಯಲ್ಲಿ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಅಳವಡಿಸಬೇಕು, ಗೋಹತ್ಯೆ ಮಾಡಿ ಮಾಂಸ ಮಾಡುವ ದಂಧೆ ನಡೆಸಿದ ಪಾತಕಿಗಳನ್ನು ಕೂಡಲೇ ಬಂಧಿಸಬೇಕು ಎಂದು ಎಚ್ಚರಿಸಿದ್ದಾರೆ.