ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸವಿತಾ ಸಮಾಜದ ಕ್ಷೌರಿಕರಿಗೆ 5 ಸಾವಿರ ರೂ. ಸಹಾಯಧನ ಘೋಷಿಸಿರುವುದನ್ನು ಬಂಟ್ವಾಳ ತಾಲೂಕು ಸವಿತಾ ಸಮಾಜ ಸ್ವಾಗತಿಸಿದೆ.
ಪ್ರಸ್ತುತ ಈ ಸಹಾಯಧನವನ್ನು ಯಾವ ರೀತಿ ನೀಡುತ್ತದೆ ಎಂಬುದರ ಕುರಿತು ಮಾಹಿತಿ ಇಲ್ಲ. ಆದರೆ ಸರಕಾರವು ಅಸಂಘಟಿತ ಕಾರ್ಮಿಕರಿಗೆ ಸಹಾಯಧನವನ್ನು ಕಾರ್ಮಿಕ ಇಲಾಖೆಯ ಮೂಲಕ ವಿತರಿಸುತ್ತಿದ್ದು, ಅದನ್ನು ಪಡೆಯುವುದಕ್ಕೆ ಸ್ಮಾರ್ಟ್ ಕಾರ್ಡ್ ಅಗತ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಕ್ಕಾಗಿ ಸ್ಮಾರ್ಟ್ ಕಾರ್ಡ್ ಮಾಡುವುದಕ್ಕೆ ೬೦ ವರ್ಷದೊಳಗಿನ ಸವಿತಾ ಸಮಾಜದ ಕ್ಷೌರಿಕರು ಬಿ.ಸಿ.ರೋಡಿನ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿರುವ ಸವಿತಾ ಸೌಹಾರ್ದ ಸೊಸೈಟಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವೇಳೆ ಜನ್ಮ ದಿನಾಂಕ ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ/ ಚಲನಾ ಪರವಾನಿಗೆ/ ಶಾಲಾ ದಾಖಲಾತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಇತ್ತೀಚಿನ ೨ ಭಾವಚಿತ್ರ ನೀಡಬೇಕಿದೆ. ಸಂಕಷ್ಟಕ್ಕೊಳಗಾದ ಸವಿತಾ ಸಮಾಜದ ಬಂಧುಗಳಿಗೆ ಈಗಾಗಲೇ ಸಂಘದ ವತಿಯಿಂದ ಕಿಟ್ ಗಳನ್ನು ವಿತರಿಸಲಾಗಿದೆ. ತಾಲೂಕಿನ ಸವಿತಾ ಸಮಾಜದ ಕ್ಷೌರಿಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಗಾಗಿ ಸಂಘವು ಬಂಟ್ವಾಳ ಶಾಸಕರ ಬಳಿ ಮನವಿ ಮಾಡಿದೆ ಎಂದು ತಾಲೂಕು ಸಂಘದ ಅಧ್ಯಕ್ಷ ಸುರೇಶ್ ನಂದೊಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.