ಬಂಟ್ವಾಳ ಪೇಟೆಯಲ್ಲೀಗ ಕೊರೊನಾ 6 ಪ್ರಕರಣಗಳಿರುವ ಕಾರಣ ಹಳ್ಳಿ ಶಾಪಿಂಗ್ ಆನ್ಲೈನ್ ನಲ್ಲೇ ಇದ್ದರೆ ಹೇಗೆ ಎಂಬ ಐಡಿಯಾದಲ್ಲಿ ಇಬ್ಬರು ಸಾಫ್ಟ್ ವೇರ್ ಸ್ನೇಹಿತರು ರಚಿಸಿದ ಆನ್ಲೈನ್ ಶಾಪಿಂಗ್ ನೆಟ್ವರ್ಕ್ smartbantwal.com
ಈ ಯುವಕರ ಹೆಸರು ಸಂದೀಪ್ ಬಂಟ್ವಾಳ್ ಮತ್ತು ಕೃಷ್ಣಕುಮಾರ ಸೋಮಯಾಜಿ. ಈಗಾಗಲೇ ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಸ ಎಸೆಯುವವರನ್ನು ಯಂತ್ರದ ಮೂಲಕ ಸ್ಪಾಟ್ ಮಾಡಿ ಕ್ಯಾಮರಾ ಮೂಲಕ ಪತ್ತೆಹಚ್ಚುವ ರಿಮೋಟ್ ಕ್ಯಾಮರಾಗಳ ಡೆಮೋ ಮಾಡಿ ಗಮನ ಸೆಳೆದವರು. ಇದೀಗ ಲಾಕ್ ಡೌನ್ ಸಂದರ್ಭ ಬಂಟ್ವಾಳದ ಅಂಗಡಿಗಳಲ್ಲಿ ಪೇಟೆ ಮತ್ತು ಸುತ್ತಮುತ್ತಲಿನ ಜನರು ಒಟ್ಟು ಸೇರದೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪೇಟೆಗೇ ಬಾರದಂಥ ಸನ್ನಿವೇಶ ಇರುವ ಕಾರಣ, ಸಂದೀಪ್ ಬಂಟ್ವಾಳ್ ಮತ್ತು ಕೃಷ್ಣಕುಮಾರ ಸೋಮಯಾಜಿ ಸ್ಮಾರ್ಟ್ ಬಂಟ್ವಾಳ (smartbantwal.com) ಎಂಬ ಆನ್ಲೈನ್ ಶಾಪಿಂಗ್ ಮೂಲಕ ನೆರವಾಗುತ್ತಿದ್ದಾರೆ. ಇದು ಲಾಕ್ ಡೌನ್ ಸಂದರ್ಭ ಅವರಿಬ್ಬರು ರಚಿಸಿದ ಸಾಫ್ಟ್ ವೇರ್.
ಬಂಟ್ವಾಳ ಪರಿಸರದ ಕೆಲ ಅಂಗಡಿ, ಮೆಡಿಕಲ್ ಜೊತೆ ಇವರು ಕೈಜೋಡಿಸಿದ್ದು, ಈ ಅಂಗಡಿಗಳ ಮೊಬೈಲ್ ನಂಬರ್ ಅನ್ನು ಸ್ಮಾರ್ಟ್ ಬಂಟ್ವಾಳ ಆನ್ಲೈನ್ ನಲ್ಲಿ ನಮೂದಿಸಲಾಗಿರುತ್ತದೆ. ಅದಕ್ಕೆ ಗ್ರಾಹಕರು ಚೀಟಿಯನ್ನು ಕಳುಹಿಸಿ ಎಲ್ಲಿಗೆ ಒದಗಿಸಬೇಕು ಎಂದು ನಮೂದಿಸಿದರೆ, ಮರುದಿನ ಅಂಗಡಿ, ಮೆಡಿಕಲ್ ನಿಂದ ಆಟೊದಲ್ಲಿ ಬೇಕಾದ ವಸ್ತುಗಳು ಬರುತ್ತವೆ. ವಸ್ತುವನ್ನು ಆಟೊದಲ್ಲಿ ತಲುಪಿಸುವ ದರ 35 ರೂ ಆಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಈ ಕಾರ್ಯ ನಡೆಯುತ್ತಿದೆ ಕೆಂಪುಗುಡ್ಡೆ, ಲೊರೆಟ್ಟೊ, ಗಾಣದಪಡ್ಪು, ಕೆಳಗಿನಪೇಟೆ, ಬೈಪಾಸ್, ಜಕ್ರಿಬೆಟ್ಟು, ಅಗ್ರಾರ್, ಹಳೆಗೇಟು, ಕರೆಂಕಿ, ಅಲ್ಲಿಪಾದೆ ಮಾರ್ಗದವರಿಗೆ ಸದ್ಯಕ್ಕೆ ಈ ಶಾಪಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ದುಬೈ ಸಹಿತ ವಿದೇಶಗಳಲ್ಲಿರುವವರ ಮನೆಯವರು ಅಂಗಡಿಗೆ ಹೋಗಲಾರದ ಪರಿಸ್ಥಿತಿ ಇದ್ದು, ಅವರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈಗಾಗಲೇ ಕೆಲವು ಮನೆಗಳಿಗೆ ದಿನಸಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸನ್ನಿವೇಶ ಇರುವ ಕಾರಣ, ಈ ವ್ಯವಸ್ಥೆಯನ್ನು ನಾವು ಆರಂಭಿಸಿದ್ದೇವೆ ಎನ್ನುತ್ತಾರೆ ಸಂದೀಪ್.