ಬಂಟ್ವಾಳ ತಾಲೂಕಿನಿಂದ ಎರಡನೇ ಹಂತದಲ್ಲಿ ತಾಲೂಕಿನಾದ್ಯಂತ ಇರುವ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ಮರಳುವ ಕಾರ್ಯ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಳಿಕ ನಡೆಯಿತು.
ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಯಾದಗಿರಿ, ರಾಯಚೂರು, ಹಾಸನ, ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ಕೊಪ್ಪಳ, ಹಾವೇರಿ, ವಿಜಯಪುರ, ಅಂಕೋಲ, ಬಾಗಲಕೋಟೆ, ಗದಗ, ಕಾರವಾರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ ಹೀಗೆ 27 ಜಿಲ್ಲೆಗಳಿಗೆ ತೆರಳುವ ಸುಮಾರು 353ರಷ್ಟು ಕಾರ್ಮಿಕರನ್ನು ಪಿಡಿಒಗಳ ಮೂಲಕ ಬಸ್ ನಿಲ್ದಾಣಕ್ಕೆ ಕರೆತರಲಾಯಿತು. ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಆಹಾರ, ನೀರಿನ ಬಾಟಲಿಗಳನ್ನು ಒದಗಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬಸ್ಸಿಗೆ ಹತ್ತಿಸಲಾಯಿತು. ಬಳಿಕ ನಿಯಮಾವಳಿಗಳ ಪ್ರಕಾರವೇ ಅವರನ್ನು ಕುಳ್ಳಿರಿಸಿ ಆಯಾ ಊರುಗಳಿಗೆ ಕರೆದೊಯ್ಯುವ ಕಾರ್ಯ ನಡೆಯುತ್ತಿದೆ. ಒಟ್ಟು 15 ಬಸ್ಸುಗಳಲ್ಲಿ ಕಾರ್ಮಿಕರು ತೆರಳುತ್ತಿದ್ದಾರೆ.
ಈ ವೇಳೆ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ಅವರು ಸ್ಥಳದಲ್ಲಿ ಹಾಜರಿದ್ದು, ಕಾರ್ಮಿಕರನ್ನು ಕರೆದುಕೊಂಡು ಹೋಗುವ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಅಗತ್ಯವಿರುವ ಆಹಾರ, ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿದರು. ಪಲಾವ್ ಮತ್ತು ನೀರಿನ ಬಾಟಲಿಗಳನ್ನು ಸ್ಥಳದಲ್ಲೇ ಒದಗಿಸಿದರೆ, ಚೌಚೌ ಬಾತ್, ಶೀರಾ, ಸಜ್ಜಿಗೆಯನ್ನು ಚಾಲಕರಿಗೆ ಪಾರ್ಸೆಲ್ ನೀಡಲಾಯಿತು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಕಾರ್ಮಿಕ ನಿರೀಕ್ಷಕರಾದ ಮೆರ್ಲಿನ್ ಗ್ರೇಸಿ ಡಿಸೋಜ, ವಿಟ್ಲ ಪಪಂ ಮುಖ್ಯಾಧಿಕಾರಿ ಮಾಲಿನಿ, ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಬಂಟ್ವಾಳ ನಗರ, ಗ್ರಾಮಾಂತರ ಠಾಣೆ ಎಸ್ಸೈಗಳಾದ ಅವಿನಾಶ್, ಪ್ರಸನ್ನ, ಟ್ರಾಫಿಕ್ ನ ಗಣೇಶ್ ಪೈ, ಆರೋಗ್ಯ ಇಲಾಖೆಯ ಡಾ. ಸತೀಶ್ ಮತ್ತು ಡಾ. ಕಾಮತ್ , ಪ್ರವೀಣ್, ಯಶೋಧಾ, ಕೆ.ಎಸ್.ಆರ್.ಟಿ.ಸಿ, ಕಂದಾಯ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಆರೋಗ್ಯ ಸಹಿತ ಹಲವು ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಶಾಸಕರ ಕಚೇರಿ ಸಹಾಯವಾಣಿ ತಂಡದ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದು ಪೂರಕ ವ್ಯವಸ್ಥೆ ಕಲ್ಪಿಸಲು ನೆರವಾದರು.