ತುಂಬೆಯಲ್ಲಿ ರವಿವಾರ ಆಟೋ ಚಾಲಕರು, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಮಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿದ ಬಳಿಕ ಮಾತನಾಡಿದ ಮಂಗಳೂರು ಶಾಸಕ ಯು.ಟಿ.ಖಾದರ್, ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುಂಬೆ ಗ್ರಾಮದ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ಸೀಲ್ಡೌನ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೀಲ್ಡೌನ್ ತೆಗೆಯಲು ಜಿಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಮಾತನಾಡಿದ್ದು ಸೋಮವಾರದಿಂದ ಸೀಲ್ಡೌನ್ ತೆರವುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದರು.
ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರು ಮತ್ತು ಕಾರ್ಮಿಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ನಮ್ಮಿಂದ ಸಾಧ್ಯವಾದಷ್ಟು ನೆರವಾಗಿದ್ದೇವೆ. ಸರಕಾರ ಕೂಡಾ ಅವರಿಗೆ ಕೂಡಲೇ ನೆರವಾಗುವ ಮೂಲಕ ಸ್ವಾಭಿಮಾನದಿಂದ ಜೀವಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ ತುಂಬೆ, ಪ್ರಮುಖರಾದ ಮೋನಪ್ಪ ಮಜಿ, ಪ್ರಕಾಶ್ ಶೆಟ್ಟಿ ಶ್ರೀಶೈಲ, ರಶೀದ್ ತುಂಬೆ, ಜಗದೀಶ್ ಗಟ್ಟಿ, ಇಬ್ರಾಹೀಂ ವಳವೂರು, ಅಝೀಝ್ ವಳವೂರು, ಸುನಿಲ್ ರೊಟ್ಟಿಗುಡ್ಡೆ, ಮಾಕ್ಸಿಮ್ ರೊಟ್ಟಿಗುಡ್ಡೆ, ಮಾದವ ಬರೆ, ಪ್ರಭಾಕರ ರಾಮಲ್ಕಟ್ಟೆ, ಕೇಶವ ತುಂಬೆ, ಆಶಿಫ್ ಕೆಳಗಿನ ತುಂಬೆ, ಇಸಾಕ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.