ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟ ಕೊರೊನಾ ಸೋಂಕಿತ ಬಂಟ್ವಾಳ ಪೇಟೆಯ 67 ವರ್ಷದ ಮಹಿಳೇ ಅಂತ್ಯಸಂಸ್ಕಾರವನ್ನು ಮಂಗಳೂರು ಬೋಳೂರು ಹಿಂದು ರುದ್ರಭೂಮಿಯ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಮೃತದೇಹವನ್ನು ಸಂಬಂಧಿಕರಿಗೆ ದೂರದಿಂದಲೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಕೊರೊನಾ ಸೋಂಕಿನಿಂದ ಈ ಹಿಂದೆ ಬಂಟ್ವಾಳದ ಒಂದೇ ಮನೆಯ ಇಬ್ಬರು ಮಹಿಳೆಯರು ಮೃತಪಟ್ಟ ಸಂದರ್ಭದ ಅಂತ್ಯಸಂಸ್ಕಾರದ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಮೊದಲ ಸಾವು ಸಂಭವಿಸಿದ ಸಂದರ್ಭ ಬೋಳೂರು ಸ್ಮಶಾನದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಎರಡನೇ ಸಾವು ಸಂಭವಿಸಿದಾಗ ಅಂತ್ಯ ಸಂಸ್ಕಾರಕ್ಕೆ ಮಂಗಳೂರಿನ ಬೋಳೂರು, ಪಚ್ಚನಾಡಿಯಲ್ಲಿ ಆಕ್ಷೇಪಗಳು ಬಂದದ್ದಷ್ಟೇ ಅಲ್ಲ, ಹಲವೆಡೆ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದ ಬಳಿಕ ಮಧ್ಯರಾತ್ರಿ ಬಿ.ಸಿ.ರೋಡಿನ ಕೈಕುಂಜೆಯ ಹಿಂದು ರುದ್ರಭೂಮಿಯಲ್ಲಿಉ ನಡೆಸಲಾಗಿತ್ತು. ಇದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಅದಾದ ಬಳಿಕವಷ್ಟೇ ಕೊರೊನಾ ಸಾವಿನ ಮೃತದೇಹದ ಅಂತ್ಯಸಂಸ್ಕಾರವನ್ನು ಬೋಳೂರು ಸ್ಮಶಾನದಲ್ಲಿ ನಡೆಸುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.