ಬಂಟ್ವಾಳ ಪೇಟೆಯ ಮೂರನೇ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬಂಟ್ವಾಳ ಕಸಬಾಕ್ಕೆ ಒಳಪಡುವ ಬಂಟ್ವಾಳ ಪೇಟೆ ನಿವಾಸಿ 67 ವರ್ಷದ ಮಹಿಳೆ ಸಾವನ್ನಪ್ಪಿದವರು.
ಇವರು ಏ.18ರಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ವಿಭಾಗಕ್ಕೆ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿಂದ ದಾಖಲಾಗಿದ್ದರು. ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ವೆನ್ಲಾಕ್ ಗೆ ಅವರು ದಾಖಲಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಕಂಡುಬಂದಿತ್ತು. ಅವರಿಗೆ ವೈರಲ್ ನ್ಯುಮೋನಿಯಾ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರು ಕ್ರೋನಿಕ್ ಓಬ್ ಸ್ಟ್ರಕ್ಟಿವ್ ಪಲ್ಮೊನರಿ ಡಿಸೀಸ್ ನಿಂದ ಹಾಗೂ ಮಧುಮೇಹದಿಂದಲೂ ಬಳಲುತ್ತಿದ್ದರು. ಇವರ ಗಂಟಲು ದ್ರವ ಮಾದರಿಯನ್ನು ಕಳುಹಿಸಿದಾಗ ಏ.20ರಂದು ವರದಿ ಪಾಸಿಟಿವ್ ಬಂದಿತ್ತು. ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಏ.30ರಂದು ಸಂಜೆ 5.40ಕ್ಕೆ ಅವರು ನಿಧನ ಹೊಂದಿದ್ದಾರೆ ಎಂದು ವೆನ್ಲಾಕ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಅಕ್ಕಪಕ್ಕದ ಮನೆಯ ಮೂವರು ಕೊರೊನಾ ಹಿನ್ನೆಲೆಯಲ್ಲಿ ಸಾವನ್ನಪ್ಪಿದಂತಾಗಿದೆ. ಏ.18ರಂದು ಬಂಟ್ವಾಳದ ಅಕ್ಕಪಕ್ಕದ ಇಬ್ಬರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ 50 ವರ್ಷದ ಮಹಿಳೇ ಏ.19ರಂದು ಮೃತಪಟ್ಟರೆ, ಇವರು ಏ.30ರಂದು ಮೃತಪಟ್ಟಿದ್ದಾರೆ. ಈ ನಡುವೆ ಏ.19ರಂದು ಮೃತ ಮಹಿಳೆಯ ಅತ್ತೆ ಮಂಗಳೂರಿನ ಫಸ್ಟ್ ನ್ಯೂರೊದಲ್ಲಿ ದಾಖಲಾಗಿದ್ದ ಸಂದರ್ಭ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಅವರು ಏ.23ರಂದು ಸಾವನ್ನಪ್ಪಿದ್ದರು. ಇಂದು ಮೃತಪಟ್ಟ ಮಹಿಳೆಯ ಮಗಳಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರು ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.